ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಡಲು ಬಿಜೆಪಿ ಮತ್ತು ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಸಂಚು ರೂಪಿಸಿವೆ ಎಂದು ಆಮ್ ಆದ್ಮಿ ಪಕ್ಷ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಎಎಪಿ ಹಿರಿಯ ನಾಯಕ ಮನೀಶ್ ಸಿಸೋಡಿಯಾ, ‘ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿನಲ್ಲಿಡಲು ಬಿಜೆಪಿ ಸೂಚನೆಯಂತೆ ಸಿಬಿಐ ಬೊಂಬೆಯಂತೆ ಕುಣಿಯುತ್ತಿದೆ. ತನಿಖಾ ಸಂಸ್ಥೆಗಳು ರಾಜಕೀಯ ತಾಳಕ್ಕೆ ತಕ್ಕಂತೆ ಕುಣಿಯಬಹುದು. ಆದರೆ, ಸಂವಿಧಾನ ಮತ್ತು ನ್ಯಾಯ ಸತ್ಯದ ಜೊತೆಗಿದೆ. ಬಿಜೆಪಿ ನಡೆಸುತ್ತಿರುವ ಷಡ್ಯಂತ್ರಗಳು ವಿಫಲವಾಗಲಿದ್ದು, ಮುಂದೊಂದು ದಿನ ಸತ್ಯ ಮತ್ತು ಪ್ರಾಮಾಣಿಕತೆ ಗೆಲ್ಲಲಿದೆ’ ಎಂದು ಅವರು ಹೇಳಿದ್ದಾರೆ.
अरविंद केजरीवाल जी को जेल में रखने कें लिए BJP के एजेंडे पर CBI किस तरह कठपुतली बनकर नाच रही है, ज़रा देखिए-
— Manish Sisodia (@msisodia) August 24, 2024
⁃जिस दिन अदालत में जाकर CBI कहती है कि ज़मानत याचिका पर हमारा जवाब तैयार नहीं है इसलिए ज़मानत की सुनवाई 14 दिन आगे बढ़ा दी जाए. उसी दिन CBI का जवाब मीडिया में दे दिया…
‘ಕೇಜ್ರಿವಾಲ್ ಅವರ ಜಾಮೀನು ವಿಚಾರಣೆಗೆ ಸಂಬಂಧಿಸಿದಂತೆ ಸಿಬಿಐ ಅಫಿಡವಿಟ್ ಸಿದ್ಧವಾಗಿದೆ. ಆದರೆ, ಕೇಜ್ರಿವಾಲ್ ಅವರನ್ನು ಇನ್ನೂ ಕೆಲವು ದಿನಗಳವರೆಗೆ ಜೈಲಿನಲ್ಲಿಡಲು ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಸುಳ್ಳು ಹೇಳಿದೆ. ಅವರು ಎಷ್ಟೇ ಪ್ರಯತ್ನಿಸಿದರೂ ಅಂತಿಮವಾಗಿ ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ನಾನು ಬಿಜೆಪಿಗೆ ಹೇಳಬಯಸುತ್ತೇನೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎಷ್ಟೇ ಪ್ರಯತ್ನಿಸಿದರೂ ಮನೀಶ್ ಸಿಸೋಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ನ್ಯಾಯ ಸಿಕ್ಕಿರುವುದನ್ನು ನೋಡಿದ್ದೇವೆ’ ಎಂದು ಸಚಿವೆ ಅತಿಶಿ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತಮ್ಮ ಬಂಧನ ಪ್ರಶ್ನಿಸಿ ಮತ್ತು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 5ಕ್ಕೆ ಮುಂದೂಡಿದೆ. ಕೇಜ್ರಿವಾಲ್ ಅವರ ಜಾಮೀನು ಅರ್ಜಿಯ ಮೇಲಿನ ಅಫಿಡವಿಟ್ ಸಲ್ಲಿಸಲು ತನಿಖಾ ಸಂಸ್ಥೆಯು ಹೆಚ್ಚಿನ ಸಮಯ ಕೋರಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕೇಜ್ರಿವಾಲ್ ಅವರನ್ನು ಜೂನ್ 26ರಂದು ಸಿಬಿಐ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.