ಬೆಂಗಳೂರು: ‘ಹಿಜಾಬ್ ವಿಷಯ ಹಠಾತ್ ಆಗಿ ಮುನ್ನೆಲೆಗೆ ಬಂದಿರುವುದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೊಡ್ಡ ಕುತಂತ್ರ ಅಡಗಿದೆ’ ಎಂದು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಗ್ಯಾರಂಟಿಗಳಿಂದ ಬರಿದಾದ ಖಜಾನೆ, ಅನುದಾನಕ್ಕಾಗಿ ಶಾಸಕರ ಒತ್ತಡ, ನಿಗಮ ಮಂಡಳಿ ನೇಮಕಕ್ಕೆ ಸೊಪ್ಪು ಹಾಕದ ಹೈಕಮಾಂಡ್ ಇವೆಲ್ಲದರಿಂದ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಜಾಬ್ ವಿಷಯವನ್ನು ಪ್ರಸ್ತಾಪಿಸಿ ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ’ ಎಂದು ಆರೋಪಿಸಿದ್ದಾರೆ.
ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ವಿರೋಧ ವ್ಯಕ್ತಪಡಿಸಿದ್ದಾರೆ. ‘ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಜಾತ್ಯತೀತ ಸ್ವರೂಪವನ್ನು ಪ್ರಶ್ನಿಸುವಂತಿದೆ’ ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಹೇಳಿದ್ದೇನು?
‘ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚಿಸಿದ್ದೇನೆ‘ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಮೈಸೂರಿನ ಕಲವಂದೆಯಲ್ಲಿ ಮಾತನಾಡಿದ್ದ ಅವರು, ‘ಉಡುಪು, ಆಹಾರ ಪದ್ಧತಿ... ಅವು ನಿಮ್ಮ ಆಯ್ಕೆ. ನಾನೇಕೆ ಇವುಗಳಿಗೆ ಅಡ್ಡಿಯಾಗಲಿ? ನೀವು ಬಯಸಿದ ಉಡುಪನ್ನು ಧರಿಸಿ, ನಿಮಗೆ ಬೇಕಾದದ್ದನ್ನು ತಿನ್ನಿ. ನನಗೆ ಬೇಕೆನಿಸಿದ್ದನ್ನು ನಾನು ತಿನ್ನುವೆ. ಉಡುಪು, ಆಹಾರ ಅವರವರ ಇಷ್ಟ ಮತ್ತು ಹಕ್ಕು. ಇದು ತುಂಬಾ ಸರಳ, ಓಟಿಗಾಗಿ ರಾಜಕಾರಣ ಮಾಡಬಾರದು. ನಾವು ಅಂತಹ ರಾಜಕಾರಣ ಮಾಡುವುದಿಲ್ಲ’ ಎಂದು ಹೇಳಿದ್ದರು.
ಹಿಜಾಬ್ ವಿಷಯ ಹಠಾತ್ ಆಗಿ ಮುನ್ನೆಲೆಗೆ ಬಂದಿರುವುದರ ಹಿಂದೆ ಮುಖ್ಯಮಂತ್ರಿ @siddaramaiah ನವರ ದೊಡ್ಡ ಕುತಂತ್ರ ಅಡಗಿದೆ.
— R. Ashoka (ಆರ್. ಅಶೋಕ) (@RAshokaBJP) December 23, 2023
ಗ್ಯಾರೆಂಟಿಗಳಿಂದ ಬರಿದಾದ ಖಜಾನೆ, ಅನುದಾನಕ್ಕಾಗಿ ಶಾಸಕರ ಒತ್ತಡ, ನಿಗಮ ಮಂಡಳಿ ನೇಮಕಕ್ಕೆ ಸೊಪ್ಪು ಹಾಕದ ಹೈಕಮಾಂಡ್ ಇವೆಲ್ಲದರಿಂದ ತಾವೇ ಸೃಷ್ಟಿಸಿಕೊಂಡ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿರುವ ಮುಖ್ಯಮಂತ್ರಿ…
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.