ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮ: ಸೋನಿಯಾ, ರಾಹುಲ್‌ ಮೌನ ಪ್ರಶ್ನಿಸಿದ ಬಿಜೆಪಿ

Published 12 ಸೆಪ್ಟೆಂಬರ್ 2023, 23:30 IST
Last Updated 12 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಮತಬ್ಯಾಂಕ್‌ ರಾಜಕೀಯದ ರಹಸ್ಯ ಕಾರ್ಯಸೂಚಿಯ ಭಾಗವಾಗಿ ‘ಇಂಡಿಯಾ’ ಮೈತ್ರಿಕೂಟವು ಸನಾತನ ಧರ್ಮವನ್ನು ಟೀಕಿಸುತ್ತಿದೆ ಎಂದು ಬಿಜೆಪಿ ದೂರಿದೆ.

‘ಪದೇ ಪದೇ ಸನಾತನ ಧರ್ಮಕ್ಕೆ ಅವಹೇಳನ ಮಾಡಲಾಗುತ್ತಿದೆ. ಪ್ರಾಚೀನ ನಂಬಿಕೆ ಮೇಲೆ ದಾಳಿ ನಡೆಸುವುದು ಕಾಂಗ್ರೆಸ್‌ನ ತಂತ್ರಗಾರಿಕೆಯ ಭಾಗವಾಗಿದೆ. ಈ ಬಗ್ಗೆ ಆ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರತಿಕ್ರಿಯಿಸದೆ ಮೌನಕ್ಕೆ ಜಾರಿದ್ದಾರೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ‘ಎಕ್ಸ್‌’ನಲ್ಲಿ ಆಪಾದಿಸಿದ್ದಾರೆ.

‘ಇಂಡಿಯಾ’ವು ಸನಾತನ ಧರ್ಮದ ಸಿದ್ಧಾಂತವನ್ನು ವಿರೋಧಿಸುತ್ತದೆ ಎಂದು ಹೇಳಿಕೆ ನೀಡಿರುವ ತಮಿಳುನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿ ಅವರನ್ನು ಕಮಲ ಪಾಳಯ ತರಾಟೆಗೆ ತೆಗೆದುಕೊಂಡಿದೆ.

ವಿರೋಧ ಪಕ್ಷಗಳಿಗೆ ಸಾಂವಿಧಾನಿಕ ನಿಬಂಧನೆಗಳ ಬಗ್ಗೆ ಅರಿವು ಇಲ್ಲವೇ? ಯಾವುದಾದರೂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವುದಕ್ಕೆ ಸಂವಿಧಾನದಲ್ಲಿ ಅವಕಾಶ ನೀಡಲಾಗಿದೆಯೇ ಎಂಬ ಬಗ್ಗೆ ಕಾಂಗ್ರೆಸ್‌ ಹಾಗೂ ‘ಇಂಡಿಯಾ’ ನಿಲುವು ಸ್ಪಷ್ಟಪಡಿಸಬೇಕು ಎಂದು ನಡ್ಡಾ ಆಗ್ರಹಿಸಿದ್ದಾರೆ.

‘ಮೊಹಬ್ಬತ್‌ ಕಿ ದುಕಾನ್‌‘ನಲ್ಲಿ ಸನಾತನ ಧರ್ಮದ ದ್ವೇಷವನ್ನು ‘ಮಾರಾಟ’ ಮಾಡುತ್ತಿರುವುದು ಏಕೆ ಎಂಬುದಕ್ಕೆ ರಾಹುಲ್‌ ಉತ್ತರಿಸಬೇಕಿದೆ ಎಂದಿರುವ ಅವರು, ಅಧಿಕಾರಕ್ಕಾಗಿ ಒಡೆದಾಳುವ ನೀತಿಯೇ ಇದರ ಹಿಂದಿರುವ ಮೂಲ ಉದ್ದೇಶವಾಗಿದೆ ಎಂದು ಆಪಾದಿಸಿದ್ದಾರೆ.

ಸೋನಿಯಾ ಮೌನವೇಕೆ?: ‘ಪ್ರತಿದಿನ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಅವಮಾನಿಸುತ್ತಿದ್ದರೂ ಸೋನಿಯಾ ಅವರು ಮೌನ ತಳೆದಿರುವುದು ಏಕೆ’ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಬಿಹಾರ ಸಚಿವ ಹಾಗೂ ಆರ್‌ಜೆಡಿ ನಾಯಕ ಚಂದ್ರಶೇಖರ್‌, ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್‌ ಮೌರಾ ಅವರು ‘ರಾಮಚರಿತಮಾನಸ’ದಂತಹ ಪವಿತ್ರ ಹಿಂದೂ ಗ್ರಂಥಗಳನ್ನು ಟೀಕಿಸುತ್ತಿದ್ದಾರೆ. ಆದರೆ, ಈ ಪಕ್ಷಗಳ ನಾಯಕರು ಕೂಡ ಮೌನವಾಗಿದ್ದಾರೆ. ಇದಕ್ಕೆ ಅವರ ಒಪ್ಪಿಗೆ ಇರುವುದನ್ನು ಇದು ಸೂಚಿಸುತ್ತದೆ ಎಂದು ದೂರಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT