ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪಚುನಾವಣೆ: ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಪತ್ರ

Last Updated 3 ಜುಲೈ 2021, 21:32 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಎರಡನೇ ಅಲೆಯು ಕ್ಷೀಣಿಸುತ್ತಿದ್ದು ಪಶ್ಚಿಮ ಬಂಗಾಳದಲ್ಲಿ, ಖಾಲಿ ಇರುವ ವಿಧಾನಸಭೆಯ ಏಳು ಕ್ಷೇತ್ರಗಳಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಚುನಾವಣೆ ನಡೆಸಬೇಕು ಎಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ವಿಧಾನಸಭೆಗೆ ಆಯ್ಕೆಯಾಗದ ಕಾರಣಕ್ಕೆ ಉತ್ತರಾಖಂಡದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸಿದ ಬೆಳವಣಿಗೆಯನ್ನು ನೆಪವಾಗಿಸಿ, ಪಶ್ಚಿಮ ಬಂಗಾಳದಲ್ಲಿಯೂ ಮುಖ್ಯಮಂತ್ರಿ ರಾಜೀನಾಮೆಗೆ ಬಿಜೆಪಿ ಒತ್ತಡ ಹೇರಬಹುದು ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

ರಾಜ್ಯಸಭೆಯ ಎರಡು ಸ್ಥಾನಗಳಿಗಷ್ಟೇ ಅಲ್ಲ, ಖಾಲಿ ಉಳಿದಿರುವ ವಿಧಾನಸಭೆಯ ಏಳು ಕ್ಷೇತ್ರಗಳಿಗೂ ಚುನಾವಣೆ ನಡೆಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದೆ.

ಉತ್ತರಾಖಂಡದಲ್ಲಿ ಸಿ.ಎಂ ರಾವತ್‌ ಅವರು ವಿಧಾನಸಭೆಗೆ ಆಯ್ಕೆಯಾಗಲು ಇನ್ನೂ ಎರಡು ತಿಂಗಳು ಸಮಯವಿತ್ತು. ಆದರೆ, ಉಪ ಚುನಾವಣೆ ನಡೆಸುವುದು ಅನಿಶ್ಚಿತವಾಗಿದ್ದು, ರಾಜ್ಯದಲ್ಲಿ ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಬೇಕಿರುವ ಕಾರಣ ಸಿ.ಎಂ. ಬದಲಿಸಲು ಬಿಜೆಪಿ ನಿರ್ಧರಿಸಿತು ಎನ್ನಲಾಗಿದೆ. ಉತ್ತರಾಖಂಡದಲ್ಲಿ ಚುನಾಯಿತ ಸರ್ಕಾರದ ಅಧಿಕಾರವಧಿ 2023ರ ಮಾರ್ಚ್‌ಗೆ ಅಂತ್ಯವಾಗಲಿದೆ.

ಜನಪ್ರತಿನಿಧಿಗಳ ಕಾಯ್ದೆಯ 151ನೇ ಸೆಕ್ಷನ್ ಪ್ರಕಾರ, ವಿಧಾನಸಭೆ, ಲೋಕಸಭೆಯ ಖಾಲಿ ಉಳಿದ ಸ್ಥಾನಗಳಿಗೆ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಆದರೆ, ಉಪ ನಿಯಮದ ಪ್ರಕಾರ, ಚುನಾವಣೆ ನಡೆಸಲಾಗದ ಸ್ಥಿತಿಯು ಇದ್ದರೆ, ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಿ ಮತ್ತೆ ಆರು ತಿಂಗಳು ಮುಂದೂಡಲು ಅವಕಾಶವಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು ಸದ್ಯ ವಿಧಾನಸಭೆ ಸದಸ್ಯರಲ್ಲ. ಇವರ ಆಯ್ಕೆಗೆ ನೆರವಾಗಲು, ಭಬನಿಪುರ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸೊವನ್‌ದೇವ್ ಚಟ್ಟೋಪಾಧ್ಯಾಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಕ್ಷೇತ್ರವೂ ಸೇರಿ ತೆರವಾಗಿರುವ ಏಳು ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT