ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದಲ್ಲಿ ಮೂರು ಸಹಕಾರ ಸಂಘ: ಕೇಂದ್ರ ಸಚಿವ ಸಂಪುಟ ನಿರ್ಧಾರ

Last Updated 11 ಜನವರಿ 2023, 19:31 IST
ಅಕ್ಷರ ಗಾತ್ರ

ನವದಹೆಲಿ: ಸಾವಯವ ಉತ್ಪನ್ನ, ಬಿತ್ತನ ಬೀಜ ಹಾಗೂ ರಫ್ತು ಉತ್ತೇಜಿಸುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಮೂರು ಸಹಕಾರ ಸಂಘಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

2002ರ ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆಯ ಅಡಿಯಲ್ಲಿ ರಾಷ್ಟ್ರಮಟ್ಟದ ಬಹುರಾಜ್ಯ ಸಂಘಗಳನ್ನು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಹಕಾರ ಸಂಘಗಳ ಬಲವರ್ಧನೆ ಹಾಗೂ ಅವುಗಳನ್ನು ಯಶಸ್ವಿ ಉದ್ಯಮಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸಹಕಾರ ಕ್ಷೇತ್ರದ ಪ್ರಯೋಜನ ಪಡೆಯಬೇಕಾದರೆ, ಸಹಕಾರ ಸಂಘಗಳು ಜಾಗತಿಕವಾಗಿ ಚಿಂತಿಸುವ ಹಾಗೂ ಸ್ಥಳೀಯವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬೇಕು ಎಂದು ಪ್ರಧಾನಿ ಅವರು ಸಭೆಯಲ್ಲಿ ಅಭಿಪ್ರಾಯಪಟ್ಟರು.

ಸಹಕಾರ ವಲಯದಲ್ಲಿ ಉತ್ಪನ್ನಗಳ ರಫ್ತಿಗೆ ಇರುವ ಸಾಧ್ಯತೆಯ ಬಾಗಿಲು ತೆರೆಯಲು ರಾಷ್ಟ್ರೀಯ ಮಟ್ಟದಲ್ಲಿ ಬಹುರಾಜ್ಯ ಸಹಕಾರ ಸಂಘ ಅಸ್ತಿತ್ವಕ್ಕೆ ತರಲಾಗುತ್ತಿದೆ. ಸರ್ಕಾರದ ವಿವಿಧ ನೀತಿಗಳ ಲಾಭ ಪಡೆಯುವ ನಿಟ್ಟಿನಲ್ಲಿ ಈ ಕ್ಷೇತ್ರಕ್ಕೆ ಮಾರ್ಗದರ್ಶನ ನೀಡುವುದು ಈ ಸಂಘದ ಉದ್ದೇಶವಾಗಿದೆ. ರಫ್ತು ಮೇಲೆ ಹೆಚ್ಚು ಒತ್ತು ನೀಡುವ ಇಂತಹ ಸಂಘ ಸ್ಥಾಪನೆಯಿಂದ ದೇಶದ ವಿವಿಧ ಹಂತಗಳಲ್ಲಿ ಉತ್ಪಾದನೆ ಹೆಚ್ಚಳವಾಗಿ, ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಸಹಕಾರ ಸಂಘಗಳ ಮೂಲಕ ರಫ್ತು ಹೆಚ್ಚಿಸುವುದು ಆತ್ಮನಿರ್ಭರವನ್ನು ಸಾಕಾರವಾಗಲಿಸಲಿದೆ ಎಂದು ಸಂಪುಟ ಸಭೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾವಯವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪನೆಯಾಗಲಿರುವ ಬಹುರಾಜ್ಯ ಸಂಘವು ಸಾವಯವ ಉತ್ಪನ್ನಗಳ ಪೂರೈಕೆ ಸರಪಳಿ, ತಾಂತ್ರಿಕ ನೆರವು, ತರಬೇತಿ, ಸಾಮರ್ಥ್ಯ ವೃದ್ಧಿ ಹಾಗೂ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ರೂಪಿಸುವ ಚಟುವಟಿಕೆಗಳನ್ನು ನಿರ್ವಹಣೆ ಮಾಡಲಿದೆ. ವಿದೇಶಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ರಫ್ತು ಸಂಘದ ಜೊತೆ ಇದು ಕೆಲಸ ಮಾಡಲಿದೆ. ಸಾವಯವ ಉತ್ಪನ್ನಗಳ ಅಧಿಕ ಬೆಲೆಯ ಲಾಭವನ್ನು, ಅವುಗಳನ್ನು ಬೆಳೆಯುವ ರೈತರಿಗೂ ತಲುಪಿಸಲು ಸಂಘ ನೆರವಾಗಲಿದೆ. ಸಾಮಾನ್ಯ ಬೇಸಾಯದ ಪದ್ಧತಿ ಮತ್ತು ಸಾವಯುವ ಕೃಷಿ ಪದ್ಧತಿ ನಡುವೆ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಒಂದೇ ಬ್ರ್ಯಾಂಡ್‌ನಲ್ಲಿ ಬಿತ್ತನೆ ಬೀಜ
ಬಿತ್ತನೆ ಬೀಜಕ್ಕೆ ಸಂಬಂಧಪಟ್ಟ ಬಹುರಾಜ್ಯ ಸಹಕಾರ ಸಂಘವು ರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪನೆಯಾಗಲಿದೆ. ಬೀಜಗಳ ಉತ್ಪಾದನೆ, ಪ್ರಮಾಣೀಕರಣ, ಖರೀದಿ, ಸಂಗ್ರಹಣೆ, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್, ವಿತರಣೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಇದು ಕೇಂದ್ರೀಯ ಸಂಸ್ಥೆಯ ರೀತಿ ಕೆಲಸ ಮಾಡಲಿದೆ. ದೇಸಿ ಬೀಜಗಳನ್ನು ಪ್ರೋತ್ಸಾಹಿಸುವ ಹಾಗೂ ಅವುಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಅಭಿವೃದ್ಧಿ ಹೊಣೆಯನ್ನೂ ಈ ಸಂಘ ನಿರ್ವಹಿಸಲಿದೆ. ಸಹಕಾರ ಸಂಘಗಳ ಜಾಲವನ್ನು ಬಳಸಿಕೊಂಡು, ಒಂದೇ ಬ್ರ್ಯಾಂಡ್‌ನ ಅಡಿಯಲ್ಲಿ ಪ್ರಮಾಣೀಕೃತ ಬೀಜಗಳನ್ನು ಬಿತ್ತನೆಗೆ ಪೂರೈಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT