ಚಂಡಿಗಢ/ನವದೆಹಲಿ: ವಿವಿಧ ಪ್ರಕರಣಗಳಲ್ಲಿ ಬೇಕಾಗಿರುವ ಪಂಜಾಬ್‌ನ ಪ್ರಮುಖ ಅಪರಾಧಿಗಳಲ್ಲಿ ಒಬ್ಬನಾದ ಸುಖ್‌ದೂಲ್ ಸಿಂಗ್ ಅಲಿಯಾಸ್ ಸುಖಾ ದುನೇಕೆನನ್ನು ಕೆನಡಾ ನಗರದ ವಿನ್ನಿಪೆಗ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಬುಧವಾರ ರಾತ್ರಿ ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಗ್ಯಾಂಗ್‌ವಾರ್‌ನಲ್ಲಿ ಈತನ ಹತ್ಯೆ ನಡೆದಿರಬಹುದು ಎನ್ನಲಾಗಿದೆ. ಕೊಲೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ 18 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಪಂಜಾಬ್‌ನ ಮೊಗಾ ಜಿಲ್ಲೆಯ ದುನೇಕೆ ಕಲಾನ್ ಗ್ರಾಮದ ಈತ 2017ರ ಡಿಸೆಂಬರ್‌ನಲ್ಲಿ ಕೆನಡಾಕ್ಕೆ ಪರಾರಿಯಾಗಿದ್ದ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಖಾಲಿಸ್ತಾನದ ಪ್ರತ್ಯೇಕತಾವಾದಿ ನಾಯಕ ಹರ್ದೀಪ್‌ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಈ ಸಂದರ್ಭದಲ್ಲೇ ಸುಖ್‌ದೂಲ್ ಹತ್ಯೆ ನಡೆದಿದೆ.
ಮೊಗಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ದೇವಿಂದರ್ ಬಾಂಬಿಹಾ ಗ್ಯಾಂಗ್‌ನೊಂದಿಗೆ ಈತನ ನಂಟು ಇತ್ತು. ಕೆನಡಾ ಮೂಲದ ದರೋಡೆಕೋರ ಅರ್ಶ್ ದಲ್ಲಾ, ದರೋಡೆಕೋರ ಲಕ್ಕಿ ಪಾಟಿಯಾಲ್, ಮಲೇಷ್ಯಾ ಮೂಲದ ಗ್ಯಾಂಗ್‌ಸ್ಟರ್ ಜಕ್ಪಾಲ್ ಸಿಂಗ್ ಅಲಿಯಾಸ್ ಲಾಲಿ ಮತ್ತು ಇತರ ಅಪರಾಧಿಗಳೊಂದಿಗೆ ಈತ ನಿಕಟ ಸಂಬಂಧ ಹೊಂದಿದ್ದ.
ವಿದೇಶಿ ನೆಲದಿಂದಲೇ ಅಪರಾಧ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದ. ಸ್ಥಳೀಯ ಸಂಪರ್ಕಗಳ ಮೂಲಕ ಪಂಜಾಬ್ ಮತ್ತು ನೆರೆಯ ಪ್ರದೇಶಗಳಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರನ್ನು ಗುರಿಯಾಗಿಸಿ ಹತ್ಯೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲ ತಿಂಗಳುಗಳಲ್ಲಿ ಪಂಜಾಬ್ ಮತ್ತು ನೆರೆಯ ಪ್ರದೇಶಗಳಲ್ಲಿ ಸುಖ್‌ದೂಲ್ ಮಾಡಿದ ಸುಲಿಗೆ ಕರೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಿವೆ.
ಜನವರಿಯಲ್ಲಿ ಸುಖ್‌ದೂಲ್ ಅವರ ಇಬ್ಬರು ಸಹಚರರಾದ ಕುಲ್ವಿಂದರ್ ಸಿಂಗ್ ಅಲಿಯಾಸ್ ಕಿಂಡಾ ಮತ್ತು ಪರಮ್‌ಜಿತ್ ಸಿಂಗ್ ಪಮ್ಮಾ ಅವರನ್ನು ಕೌಂಟರ್-ಇಂಟೆಲಿಜೆನ್ಸ್ ವಿಭಾಗ (ಬಟಿಂಡಾ) ಬಂಧಿಸಿ, ಮೂರು ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತ್ತು.
1990ರಲ್ಲಿ ಅವರ ತಂದೆ ನಿಧನ ಬಳಿಕ, ಸುಖ್‌ದೂಲ್‌ಗೆ ಅನುಕಂಪದ ಆಧಾರದ ಮೇಲೆ ಮೊಗಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜವಾನನ ಕೆಲಸ ಸಿಕ್ಕಿತು. ಅಲ್ಲಿ ಎಂಟು ವರ್ಷ ಕೆಲಸ ಮಾಡಿದ. ಕ್ರಮೇಣ ಮಾದಕವಸ್ತುಗಳ ವ್ಯಸನಿಯಾದ ಎಂದು ಮೂಲಗಳು ತಿಳಿಸಿವೆ.
2022 ರಲ್ಲಿ ಆತನ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್ ನಂಗಲ್ ಅಂಬಿಯನ್ ಹತ್ಯೆಗೆ ಸಂಬಂಧಿಸಿದಂತೆ ಈತನ ಹೆಸರು ಕೇಳಿ ಬಂದಿತ್ತು. ಹತ್ಯೆಗೆ ಶೂಟರ್ ಗಳನ್ನು ವ್ಯವಸ್ಥೆ ಮಾಡಿದ ಆರೋಪ ಇದೆ.
2022ರ ಜನವರಿಯಲ್ಲಿ ಬಾಂಬಿಹಾ ಗ್ಯಾಂಗ್‌ನ ಶೂಟರ್‌ಗಳು ಇಬ್ಬರು ಪ್ರತಿಸ್ಪರ್ಧಿ ಗ್ಯಾಂಗ್‌ನ ಸದಸ್ಯರಾದ ಮನ್‌ಪ್ರೀತ್ ಸಿಂಗ್ ಮತ್ತು ವಿಕ್ಕಿ ಸಿಂಗ್ ಅವರನ್ನು ಕೊಲೆ ಮಾಡಿದ್ದರು. ಇದರಲ್ಲೂ ಈತನ ಹೆಸರು ಕೇಳಿ ಬಂದಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.