ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಸಿ. ವ್ಯಾಲಿ ಮಾದರಿ ದೇಶದಾದ್ಯಂತ ಜಾರಿಗೆ ತರಲು ಮುಂದಾದ ಕೇಂದ್ರ

ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಯೋಜನೆ
Last Updated 12 ಜೂನ್ 2022, 14:04 IST
ಅಕ್ಷರ ಗಾತ್ರ

ನವದೆಹಲಿ: ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ಯೋಜನೆಗಳನ್ನು ವೇಗಗೊಳಿಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರವು ಕರ್ನಾಟಕದ ಕೆ.ಸಿ.(ಕೋರಮಂಗಲ–ಚಲ್ಲಘಟ್ಟ) ವ್ಯಾಲಿ ಏತ ನೀರಾವರಿ ಯೋಜನೆಯ ಮಾದರಿಯನ್ನು ದೇಶದಾದ್ಯಂತ ಜಾರಿಗೆ ತರಲು ಮುಂದಾಗಿದೆ.

‘ಕೇಂದ್ರ ಜಲಶಕ್ತಿ ಸಚಿವಾಲಯವು ಕೆರೆಗಳನ್ನು ತುಂಬಿಸಲು ಮರುಬಳಕೆಯ ನೀರನ್ನು ಪೂರೈಸುವ ಕರ್ನಾಟಕ ಸರ್ಕಾರದ ಕೆ.ಸಿ. ವ್ಯಾಲಿ ಯೋಜನೆಯನ್ನು ಅಧ್ಯಯನ ಮಾಡಿದೆ. ಕರ್ನಾಟಕದಲ್ಲಿ ಸಂಸ್ಕರಿಸಿದ ನೀರಿನಿಂದ ಕೆರೆಗಳನ್ನು ತುಂಬಿಸಿದ್ದರಿಂದ ಅಂತರ್ಜಲ ಮರುಪೂರಣ ಯೋಜನೆಯು ಉತ್ತಮ ಫಲಿತಾಂಶವನ್ನು ನೀಡಿದೆ. ಹಾಗಾಗಿ, ಈ ಯೋಜನೆಯನ್ನು ಇತರ ರಾಜ್ಯಗಳಲ್ಲಿಯೂ ಅನುಷ್ಠಾನಕ್ಕೆ ತರಲು ಮುಂದಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಇತರ ರಾಜ್ಯಗಳು ಕೆ.ಸಿ. ವ್ಯಾಲಿ ಯೋಜನೆಯ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿರುವ ಸಚಿವಾಲಯವು, ಮರುಬಳಕೆಯ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಅನುದಾನ ನೀಡಲು ಯೋಚಿಸುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಅಟಲ್ ಭೂಜಲ ಯೋಜನೆಯಡಿ ಕೆ.ಸಿ. ವ್ಯಾಲಿ ಯೋಜನೆಗೆ ಹಣವನ್ನು ನೀಡುವಂತೆ ಕರ್ನಾಟಕ ಸರ್ಕಾರವು ಮಾಡಿರುವ ಮನವಿಗೆ ಜಲಶಕ್ತಿ ಸಚಿವಾಲಯ ಒಪ್ಪಿಗೆ ನೀಡಿದೆ. ಯೋಜನೆಯಲ್ಲಿ ನೀರನ್ನು ಮತ್ತಷ್ಟು ಶುದ್ಧ ಮಾಡುವ ಸಲುವಾಗಿ ಜೈವಿಕ ಸಂಸ್ಕರಣೆಯೊಂದಿಗೆ ಮತ್ತಷ್ಟು ಮೇಲ್ದರ್ಜೆಗೆ ಏರಿಸಬೇಕು ಎಂದು ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಿಳಿಸಿದೆ’ ಎಂದೂ ಅವರು ಅಧಿಕಾರಿ ತಿಳಿಸಿದ್ದಾರೆ.

ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಸುವ ಕರ್ನಾಟಕದ ಕೆ.ಸಿ. ವ್ಯಾಲಿ ನೀರಾವರಿ ಯೋಜನೆಯು ದೇಶದಲ್ಲೇ ಮೊದಲನೆಯದಾಗಿದೆ. ಬೆಂಗಳೂರಿನಲ್ಲಿ ವಿವಿಧ ಹಂತಗಳಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಕೋಲಾರ, ಚಿಕ್ಕಬಳ್ಳಾಪುರ,ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳನ್ನು ತುಂಬಲು ಸರಬರಾಜು ಮಾಡಲಾಗುತ್ತಿದೆ. ಇದೀಗ ಈ ಯೋಜನೆಯನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಮತ್ತು ರಾಮನಗರ ಜಿಲ್ಲೆಯ ಕನಕಪುರದ ಕೆಲ ಭಾಗಗಳಿಗೆ ವಿಸ್ತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT