ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಹಂಚಿಕೆ: ‘ಕೈ’ ಉದಾರಿಯಾಗಲಿ - ‘ಇಂಡಿಯಾ’ ಮೈತ್ರಿ ಪಕ್ಷಗಳ ನಾಯಕರ ಅಭಿಮತ

ಭಿನ್ನಮತ ಶಮನ: ‘ಇಂಡಿಯಾ’ ಮೈತ್ರಿ ಪಕ್ಷಗಳ ನಾಯಕರ ಅಭಿಮತ
Published 4 ಫೆಬ್ರುವರಿ 2024, 15:45 IST
Last Updated 4 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ನವದೆಹಲಿ: ಸೀಟು ಹಂಚಿಕೆ ವಿಷಯದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಡುವಿನ ಭಿನ್ನಮತ ಬಗೆಹರಿಸಲು ಕಾಂಗ್ರೆಸ್‌ ಪಕ್ಷವೇ ಮುಂದಾಳತ್ವ ವಹಿಸಬೇಕು ಹಾಗೂ ಈ ವಿಷಯದಲ್ಲಿ ‘ಉದಾರ ನಿಲುವು’ ಪ್ರದರ್ಶಿಸಬೇಕು ಎಂದು ವಿರೋಧಪಕ್ಷಗಳ ಕೆಲ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಬರಲಿರುವ ಲೋಕಸಭೆ ಚುನಾವಣೆಯನ್ನು ವಿರೋಧಪಕ್ಷಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಶೀಘ್ರದಲ್ಲಿಯೇ ಪ್ರಕಟಿಸುವ ಜೊತೆಗೆ, ನಾಯಕನಾಗಿ ವಿರೋಧಪಕ್ಷಗಳ ಒಮ್ಮತದ ಅಭ್ಯರ್ಥಿಯನ್ನು ಜನರ ಮುಂದೆ ಬಿಂಬಿಸಬೇಕು ಎಂದು ಆ ಮುಖಂಡರು ಹೇಳಿದ್ದಾರೆ.

‘ಇಂಡಿಯಾ ಮೈತ್ರಿಪಕ್ಷಗಳ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿರುವುದು ನಿಜ. ಆದರೆ, ಬಹುತೇಕ ರಾಜ್ಯಗಳಲ್ಲಿ ಈ ಕುರಿತ ತೀರ್ಮಾನ ಪ್ರಕಟಿಸುವ ಮೂಲಕ ಶೀಘ್ರದಲ್ಲಿಯೇ ಗೊಂದಲ ಬಗೆಹರಿಯಲಿದೆ’ ಎನ್ನುತ್ತಾರೆ ಶಿವಸೇನೆ (ಉದ್ಧವ್ ಬಣ) ಸಂಸದೆ ಪ್ರಿಯಾಂಕಾ ಚತುರ್ವೇದಿ.

ಪಶ್ಚಿಮ ಬಂಗಾಳದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಆಗಿಲ್ಲ, ಗೊಂದಲ ಉಳಿದಿದೆ ಎಂಬ ಹಿನ್ನೆಲೆಯಲ್ಲಿಯೂ ತೃಣಮೂಲ ಕಾಂಗ್ರೆಸ್‌ ಪಕ್ಷವು ಇಂಡಿಯಾ ಮೈತ್ರಿಕೂಟದಲ್ಲಿಯೇ ಮುಂದುವರಿದಿದೆ. ಬಿಜೆಪಿಯನ್ನು ಮಣಿಸುವ ಸ್ಪಷ್ಟ ಭರವಸೆಯಲ್ಲಿ ಮಮತಾ ಬ್ಯಾನರ್ಜಿ ಇದ್ದಾರೆ ಎಂದೂ ಪ್ರಿಯಾಂಕಾ ಉಲ್ಲೇಖಿಸಿದರು.

ಶುಕ್ರವಾರವಷ್ಟೇ ಸುದ್ದಿಗಾರರ ಜೊತೆಗೆ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ಬಿಜೆಪಿ ನೇರಸ್ಪರ್ಧೆಯಲ್ಲಿರುವ 300 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಬೇಕು ಎಂದು ಸಲಹೆ ಮಾಡಿದ್ದೆ. ಕಾಂಗ್ರೆಸ್ ಅದನ್ನು ನಿರಾಕರಿಸಿತ್ತು. ಮುಸ್ಲಿಂ ಮತಗಳತ್ತ ದೃಷ್ಟಿನೆಟ್ಟು ಕಾಂಗ್ರೆಸ್‌ ರಾಜ್ಯಕ್ಕೆ ಬಂದರು. ಆದರೆ, ಕಾಂಗ್ರೆಸ್‌ 300 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ 30 ಸ್ಥಾನ ಗೆಲ್ಲುವುದು ತಮಗೆ ಅನುಮಾನವಾಗಿದೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.

ಸಿಪಿಐ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು, ‘ಐದು ರಾಜ್ಯಗಳಲ್ಲಿ ಕಳೆದ ವರ್ಷ ನಡೆದಿದ್ದ ಚುನಾವಣೆ ಫಲಿತಾಂಶದ ಬಳಿಕವಾದರೂ ‘ಇಂಡಿಯಾ’ ಮೈತ್ರಿಪಕ್ಷಗಳು ಪರಸ್ಪರ ವಿಶ್ವಾಸ ಹೊಂದಬೇಕಿತ್ತು ಎನ್ನುತ್ತಾರೆ. ‘ಬರಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚು ಉದಾರಿಯಾಗಿರಬೇಕು’ ಎಂದು ಅಭಿಪ್ರಾಯಪಟ್ಟರು. 

ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‌ಎಸ್‌ಪಿ) ಮುಖಂಡ ಎನ್.ಕೆ.ಪ್ರೇಮಚಂದ್ರನ್ ಅವರು, ‘ಸೀಟು ಹಂಚಿಕೆ ಕುರಿತು ವಿರೋಧಪಕ್ಷಗಳು ಹೆಚ್ಚು ಗಂಭೀರತೆ ಪ್ರದರ್ಶಿಸಬೇಕು. ಇದು ನಿರ್ಣಾಯಕ ಸಂದರ್ಭ. ಜನರು ಕಾಂಗ್ರೆಸ್‌ ಮತ್ತು ಸಮಾನಮನಸ್ಕ ಪಕ್ಷಗಳನ್ನು ಗಮನಿಸುತ್ತಿದ್ದಾರೆ’ ಎಂದರು.

‘ಇಂಡಿಯಾ’ಮೈತ್ರಿಕೂಟದ ಕಳೆದ ಸಭೆಯ ಬಳಿಕ ನಿತೀಶ್‌ ಕುಮಾರ್‌ ಮೈತ್ರಿಯಿಂದ ಹೊರನಡೆದಿದ್ದಾರೆ. ಮಮತಾ ಅವರದು ಭಿನ್ನ ನಿಲುವು. ಈಗಿನ ರಾಜಕೀಯ ಬೆಳವಣಿಗೆಗಳನ್ನು ಕುರಿತು ಅರವಿಂದ ಕೇಜ್ರಿವಾಲ್‌ ಅವರು ಖುಷಿಯಾಗಿಲ್ಲ’ ಎಂಬ ಪ್ರಸ್ತುತ ಸ್ಥಿತಿಯನ್ನು ವಿಶ್ಲೇಷಿಸಿದರು.

ಇನ್ನೊಂದೆಡೆ, ಲೋಕಸಭೆ ಸದಸ್ಯ ಡ್ಯಾನಿಶ್‌ ಅಲಿ ಅವರು, ‘ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆ ಶೀಘ್ರವೇ ಅಂತಿಮವಾಗಲಿದೆ. ಮೈತ್ರಿಪಕ್ಷಗಳು ಒಗ್ಗಟ್ಟಾಗಿಯೇ ಉಳಿಯಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಬಿಹಾರ ಬೆಳವಣಿಗೆಯನ್ನು ಉಲ್ಲೇಖಿಸಿ ಪ್ರೇಮಚಂದ್ರನ್‌ ಅವರು, ‘ಜನತೆ ಎಂದಿಗೂ ಅವಕಾಶವಾದಿ ರಾಜಕಾರಣವನ್ನು ಬೆಂಬಲಿಸುವುದಿಲ್ಲ. ನಿತೀಶ್‌ ಕುಮಾರ್‌ ಅವರ ಈಗಿನ ನಡೆಯಿಂದ ಇಂಡಿಯಾ ಮೈತ್ರಿಕೂಟಕ್ಕೇ ನೆರವಾಗಲಿದೆ. ಈ ಬೆಳವಣಿಗೆಗೆ ಬಿಹಾರದ ಜನರೇ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT