ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕಾಗಿ ಒಗ್ಗಟ್ಟಿನ ಹೋರಾಟಕ್ಕೆ ಕರೆ

ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ; ‘ಭಾರತ ರಕ್ಷಿಸಿ ರ್‍ಯಾಲಿ’ಯಲ್ಲಿ ಸೋನಿಯಾ ವಾಗ್ದಾನ
Last Updated 14 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ‘ದೇಶ ಹಾಗೂಪ್ರಜಾಪ್ರಭುತ್ವವನ್ನು ರಕ್ಷಿಸುವ ಹೊಣೆಗಾರಿಕೆಯಿಂದ ಕಾಂಗ್ರೆಸ್ ಎಂದಿಗೂ ವಿಮುಖವಾಗುವುದಿಲ್ಲ’ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ‘ಭಾರತ ರಕ್ಷಿಸಿ ರ್‍ಯಾಲಿ’ಯಲ್ಲಿ ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತೆ ಜನರಿಗೆ ಕರೆ ನೀಡಿದ ಅವರು, ‘ಕಾಂಗ್ರೆಸ್ ಈ ನಿಟ್ಟಿನಲ್ಲಿ ಎಂದೂ ಹಿಂದಡಿಯಿಡುವುದಿಲ್ಲ’ ಎಂದರು.

‘ಕಂಗೆಟ್ಟ ರಾಜ, ಅಸ್ತವ್ಯಸ್ತ ರಾಜ್ಯ’ ಎಂಬಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ‘ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ (ಎಲ್ಲರ ಅಭ್ಯುದಯ) ಎಲ್ಲಿ ಆಗಿದೆ ಎಂದು ಇಡೀ ದೇಶ ಪ್ರಶ್ನೆ ಮಾಡುತ್ತಿದೆ ಎಂದು ಸೋನಿಯಾ ಹೇಳಿದರು.

‘ಭಾರತದ ಆತ್ಮವನ್ನು ಚೂರುಚೂರು ಮಾಡಿದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಅನ್ಯಾಯವನ್ನು ಸಹಿಸುವುದು ದೊಡ್ಡ ಅಪರಾಧ. ದೇಶವನ್ನು ರಕ್ಷಿಸಬೇಕಾದ ಸಮಯ ಬಂದಿದ್ದು, ಹೋರಾಟವೊಂದೇ ಇದಕ್ಕೆ ದಾರಿ’ ಎಂದರು.

‘ಮೋದಿ–ಶಾ ನೇತೃತ್ವದ ಸರ್ಕಾರವು ಸಂಸತ್ತು ಅಥವಾ ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ಚಿಂತಿಸುವುದಿಲ್ಲ. ನೈಜ ಘಟನೆಗಳನ್ನು ಮರೆಮಾಚಿ ಜನರನ್ನು ಸಂಘರ್ಷಕ್ಕೆ ನೂಕುವುದೇ ಅವರ ಉದ್ದೇಶವಾಗಿದೆ’ ಎಂದು ಸೋನಿಯಾ ಆರೋಪಿಸಿದರು.

‘ವಿರೋಧಿಸದವರು ಹೇಡಿಗಳು’

ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾಗದವರು ಹೇಡಿಗಳೆಂದು ಇತಿಹಾಸದಲ್ಲಿ ದಾಖಲಾಗುತ್ತಾರೆ’ ಎಂದರು.

‘ನೀವು ಭಾರತವನ್ನು ಪ್ರೀತಿಸುವುದಾದರೆ, ದನಿ ಎತ್ತರಿಸಿ ಮಾತನಾಡಿ. ಈಗ ಮೌನ ವಹಿಸಿದರೆ, ನಮ್ಮ ಸಂವಿಧಾನವೇ ನಾಶವಾಗುವ ಅಪಾಯವಿದೆ. ದೇಶದ ವಿಭಜನೆ ಆರಂಭವಾಗಲಿದೆ. ಬಿಜೆಪಿ, ಆರ್‌ಎಸ್‌ಎಸ್‌ನ ಭ್ರಷ್ಟ ನಾಯಕರ ಜೊತೆಗೆ ದೇಶ ವಿಭಜನೆಗೆ ನಾವೆಲ್ಲರೂ ಹೊಣೆಗಾರರಾಗಬೇಕಾಗುತ್ತದೆ’ ಎಂದು ಪ್ರಿಯಾಂಕಾ ಗುಡುಗಿದರು.

‘ಮೋದಿ ಇದ್ದರೆ ಎಲ್ಲವೂ ಸಾಧ್ಯ’ ಎಂಬ ಘೋಷಣೆ ಎಲ್ಲೆಡೆ ಕೇಳುತ್ತಿದೆ. ‘ಹೌದು, ಮೋದಿ ಅವರಿಂದ ಎಲ್ಲವೂ ಸಾಧ್ಯವಾಗಿದೆ. ಈರುಳ್ಳಿಯು ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. 4 ಕೋಟಿ ಉದ್ಯೋಗಗಳು ನಷ್ಟವಾಗಿವೆ. 15 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ರಾಹುಲ್ ಪುನರಾಗಮನ?

ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಪಕ್ಷದಲ್ಲಿ ಹಿನ್ನೆಲೆಗೆ ಸರಿದಿದ್ದ ರಾಹುಲ್‌ ಗಾಂಧಿ ಅವರು, ಆರು ತಿಂಗಳ ಬಳಿಕ ಪ್ರಧಾನ ವೇದಿಕೆಗೆ ಬಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಜೂನ್ ತಿಂಗಳಲ್ಲಿ ರಾಜೀನಾಮೆ ನೀಡಿದ ಬಳಿಕ ಪಕ್ಷದ ಚಟುವಟಿಕೆಗಳಿಂದ ರಾಹುಲ್ ದೂರವಿದ್ದರು. ಈ ಅವಧಿಯಲ್ಲಿ ‘ಅಧ್ಯಾತ್ಮ’ ತರಬೇತಿಗಾಗಿ ವಿದೇಶಕ್ಕೆ ಹಾರಿದ್ದರು.

ಪಕ್ಷವನ್ನು ಮುನ್ನಡೆಸಲು ರಾಹುಲ್ ಅವರೇ ತಮ್ಮ ಆಯ್ಕೆ ಎಂದು ಸೋನಿಯಾ ಸ್ಪಷ್ಟಪಡಿಸಿದ್ದರು. ಶನಿವಾರ ನಡೆದ ರ್‍ಯಾಲಿಯಲ್ಲಿ ‘ರಾಹುಲ್ ನನ್ನ ನಾಯಕ’ ಎಂದು ಪ್ರಿಯಾಂಕಾ ಹೇಳಿದ್ದಾರೆ. ರಾಹುಲ್ ಅವರ ದೊಡ್ಡ ಕಟೌಟ್‌ಗಳು ರಾಮಲೀಲಾ ಮೈದಾನದ‌ಲ್ಲಿ ರಾರಾಜಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT