ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್ ಪ್ರಧಾನಿ ನೆತನ್ಯಾಹುರನ್ನು ಗುಂಡಿಕ್ಕಿ ಕೊಲ್ಲಬೇಕು: ಕಾಂಗ್ರೆಸ್ ಸಂಸದ

Published 18 ನವೆಂಬರ್ 2023, 10:59 IST
Last Updated 18 ನವೆಂಬರ್ 2023, 10:59 IST
ಅಕ್ಷರ ಗಾತ್ರ

ತಿರುವನಂತಪುರ: ಗಾಜಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ನಡೆಸುತ್ತಿರುವ ಯುದ್ಧಾಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಯಾವುದೇ ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಬೇಕು ಎಂದು ಕಾಸರಗೋಡು ಕ್ಷೇತ್ರದ ಕಾಂಗ್ರೆಸ್‌ ಸಂಸದ ರಾಜಮೋಹನ್ ಉನ್ನಿತಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಪ್ಯಾಲೆಸ್ಟೀನಿಯರನ್ನು ಬೆಂಬಲಿಸಿ ನಡೆಸಿದ ರ‍್ಯಾಲಿಯಲ್ಲಿ ಅವರು ಮಾತನಾಡಿದ್ದು, ಯುದ್ಧಾಪರಾಧಕ್ಕಾಗಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ‘ನ್ಯೂರೆಂಬರ್ಗ್ ಮಾದರಿ’ಯ ಹತ್ಯಾಕಾಂಡದಂತೆ ಗುಂಡಿಕ್ಕಿ ಕೊಲ್ಲಬೇಕು ಎಂದು ಹರಿಹಾಯ್ದಿದ್ದಾರೆ.

’ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಯುದ್ಧಾಪರಾಧಿಗಳ ವಿರುದ್ಧ ನ್ಯೂರೆಂಬರ್ಗ್ ಮಾದರಿಯನ್ನು ಪ್ರಯೋಗಿಸಲಾಗಿತ್ತು. ಆದೇ ರೀತಿ ಇದೀಗ ಇಸ್ರೇಲ್‌ ಪ್ರಧಾನಿ ವಿರುದ್ಧ ನ್ಯೂರೆಂಬರ್ಗ್ ಮಾದರಿಯನ್ನು ಅನುಸರಿಸುವ ಸಮಯ ಬಂದಿದೆ. ಇಂದು ನೆತನ್ಯಾಹು ಯುದ್ಧಾಪರಾಧಿಯಾಗಿ ವಿಶ್ವದ ಮುಂದೆ ನಿಂತಿದ್ದಾರೆ. ಪ್ಯಾಲೆಸ್ಟೀನಿಯನ್ನರ ಮೇಲೆ ಇಸ್ರೇಲ್ ಪಡೆಗಳು ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ನೆತನ್ಯಾಹು ಅವರನ್ನು ಯಾವುದೇ ವಿಚಾರಣೆಯಿಲ್ಲದೆ ಗುಂಡಿಕ್ಕಿ ಕೊಲ್ಲಬೇಕು’ ಎಂದು ರಾಜಮೋಹನ್ ಉನ್ನಿತಾನ್ ಹೇಳಿದ್ದಾರೆ.

ಇಸ್ರೇಲ್‌–ಹಮಾಸ್ ಸಂಘರ್ಷ: ಮೋದಿ ಹೇಳಿದ್ದೇನು?

ಭೌಗೋಳಿಕವಾಗಿ ದಕ್ಷಿಣದಲ್ಲಿರುವ ದೇಶಗಳ ಶೃಂಗಸಭೆ ‘ವಾಯ್ಸ್ ಆಫ್‌ ಗ್ಲೋಬಲ್ ಸೌತ್‌’ನ ಎರಡನೇ ಆವೃತ್ತಿಯನ್ನು ವರ್ಚುವಲ್‌ ಮೂಲಕ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ.

‘ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳಿಂದಾಗಿ ಜಗತ್ತು ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಇಸ್ರೇಲ್‌ ಹಾಗೂ ಹಮಾಸ್ ನಡುವಿನ ಸಂಘರ್ಷದಿಂದ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ್ದ ಬರ್ಬರ ದಾಳಿಯನ್ನು ಭಾರತ ಖಂಡಿಸಿತ್ತು. ಅದೇ ರೀತಿ, ಈ ಸಂಘರ್ಷದಲ್ಲಿ ನಾಗರಿಕರು ಸಾಯುತ್ತಿರುವುದನ್ನು ಸಹ ಭಾರತ ಬಲವಾಗಿ ಖಂಡಿಸುತ್ತದೆ’ ಎಂದೂ ಹೇಳಿದ್ದಾರೆ.

‘ಇಸ್ರೇಲ್‌–ಹಮಾಸ್‌ ಬಿಕ್ಕಟ್ಟು ಸೇರಿದಂತೆ ಜಾಗತಿಕ ವಿದ್ಯಮಾನಗಳ ಕುರಿತು ಹಾಗೂ ವಿಶ್ವದ ಒಳಿತಿಗಾಗಿ ದಕ್ಷಿಣದ ದೇಶಗಳು ಒಂದೇ ಧ್ವನಿಯಲ್ಲಿ ಮಾತನಾಡುವುದು ಅಗತ್ಯ. ಮಾತುಕತೆ–ರಾಜತಾಂತ್ರಿಕ ಮಾರ್ಗವಲ್ಲದೇ, ಇಸ್ರೇಲ್‌ ಮತ್ತು ಹಮಾಸ್‌ ಸಂಘರ್ಷದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ವೇಳೆ ಪ್ರತಿಯೊಬ್ಬರು ಸಂಯಮದಿಂದ ವರ್ತಿಸಬೇಕು ಎಂಬುದಾಗಿ ಭಾರತ ಪ್ರತಿಪಾದಿಸುತ್ತಲೇ ಬಂದಿದೆ’ ಎಂದು ವಿವರಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT