ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷ ಬುಡಕಟ್ಟು ಜನರ 'ಜಲ, ಅರಣ್ಯ, ಭೂಮಿ' ಪರವಾಗಿ ನಿಂತಿದೆ: ರಾಹುಲ್

Published 4 ಫೆಬ್ರುವರಿ 2024, 9:32 IST
Last Updated 4 ಫೆಬ್ರುವರಿ 2024, 9:32 IST
ಅಕ್ಷರ ಗಾತ್ರ

ಧನ್‌ಬಾದ್/ಬೊಕಾರೊ, ಜಾರ್ಖಂಡ್ : ’ನೀರು, ಅರಣ್ಯ, ಭೂಮಿ ಹಕ್ಕು ಕುರಿತು ಕಾಂಗ್ರೆಸ್‌ ಪಕ್ಷ ಎಂದಿಗೂ ಬುಡಕಟ್ಟು ಜನರ ಹಕ್ಕುಗಳಿಗೆ ಹೋರಾಟ ನಡೆಸಲಿದೆ‘ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ಹೇಳಿದರು.

ಜಾರ್ಖಂಡ್‌ನಲ್ಲಿ ‘ಭಾರತ್ ಜೋಡೊ ನ್ಯಾಯಯಾತ್ರೆ’ಯ ಮೂರನೇ ದಿನವಾದ ಭಾನುವಾರ ರಾಜ್ಯದ ಧನ್‌ಬಾದ್‌ ಜಿಲ್ಲೆಯಲ್ಲಿ ನಡೆದ ‘ರೋಡ್‌ ಶೋ’ನಲ್ಲಿ ಅವರು ಮಾತನಾಡಿದರು. 

’ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದನ್ನು ತಡೆಯುವುದು ಹಾಗೂ ಈ ಮೂಲಕ ದೇಶದ ನಿರುದ್ಯೋಗಿ ಯುವಜನರು, ಬುಡಕಟ್ಟು ಸಮುದಾಯದವರಿಗೆ ನ್ಯಾಯ ಒದಗಿಸುವುದೇ ಈ ನ್ಯಾಯಯಾತ್ರೆಯ ಉದ್ದೇಶ‘ ಎಂದರು.

’ಆರ್ಥಿಕ ಅಸಮತೋಲನ, ಅಧಿಕ ಮೌಲ್ಯದ ನೋಟುಗಳ ರದ್ದತಿ ಕ್ರಮ, ಜಿಎಸ್‌ಟಿ ಮತ್ತು ನಿರುದ್ಯೋಗ ಸಮಸ್ಯೆಗಳು ದೇಶದ ಯುವಜನರ ಬದುಕನ್ನು ಹಾಳುಗೆಡವಿವೆ‘ ಎಂದು ರಾಹುಲ್‌ ಅವರು ವ್ಯಾಖ್ಯಾನಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಅವರು, ‘ನಾವು 70 ವರ್ಷದಲ್ಲಿ ಏನು ಮಾಡಿದೆವು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಭಿಲಾಯ್, ರೂರ್‌ಕೆಲಾ, ದುರ್ಗಾಪುರ, ಬಾಕ್ರಾನಂಗಲ್, ಬೊಕಾರೊ, ಬರೌನಿ..ಹೀಗೇ ದೇಶದ ಆರ್ಥಿಕಾಭಿವೃದ್ಧಿಯ ಈ ಎಲ್ಲ ಸ್ಮಾರಕಗಳನ್ನು ನಿರ್ಮಿಸಿದವರೇ ಪಂಡಿತ್ ಜವಾಹರಲಾಲ್‌ ನೆಹರೂ’ ಎಂದು ಹೇಳಿದರು.

ಜಾರ್ಖಂಡ್‌ನ 13 ಜಿಲ್ಲೆಗಳಲ್ಲಿ ಎರಡು ಹಂತದಲ್ಲಿ ನ್ಯಾಯಯಾತ್ರೆಯು ಸಾಗಲಿದ್ದು, ಒಟ್ಟು 804 ಕಿ.ಮೀ.ಗಳನ್ನು ಕ್ರಮಿಸಲಿದೆ.

ಉತ್ತರಪ್ರದೇಶ: ‘ಇಂಡಿಯಾ’ ಮೈತ್ರಿಪಕ್ಷಗಳುಯಾತ್ರೆಯಲ್ಲಿ ಭಾಗಿ –ಕಾಂಗ್ರೆಸ್ 

ನವದೆಹಲಿ: ರಾಹುಲ್‌ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯಯಾತ್ರೆ’ಯು ಉತ್ತರ ಪ್ರದೇಶದಲ್ಲಿ ಸಾಗುವಾಗ ಅದರಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ನಾಯಕರೂ ಭಾಗಿಯಾಗುವರು ಎಂದು ಕಾಂಗ್ರೆಸ್ ಪಕ್ಷ ಭಾನುವಾರ ತಿಳಿಸಿದೆ. ರಾಜ್ಯದಲ್ಲಿ ನ್ಯಾಯಯಾತ್ರೆ ಕಾರ್ಯಕ್ರಮಗಳ ವಿವರ ಅಂತಿಮಗೊಂಡಂತೆ ಮೈತ್ರಿಪಕ್ಷಗಳಿಗೆ ಕಳುಹಿಸಲಾಗುವುದು. ಅವುಗಳ ಭಾಗವಹಿಸುವಿಕೆ ಮೈತ್ರಿಯನ್ನು ಬಲಪಡಿಸಲಿದೆ ಎಂದು ಪಕ್ಷ ಅಭಿಪ್ರಾಯಪಟ್ಟಿದೆ. ‘ಆಹ್ವಾನ ಬಂದಿಲ್ಲ’ ಎಂಬ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್ ಹೇಳಿಕೆಯ ಬೆನ್ನಲ್ಲೆ ಪಕ್ಷ ಈ ಪ್ರತಿಕ್ರಿಯೆ ನೀಡಿದೆ. ‘ನ್ಯಾಯಯಾತ್ರೆ ಕಾರ್ಯಕ್ರಮದ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ. ಒಂದೆರಡು ದಿನದಲ್ಲಿ ಮೈತ್ರಿಪಕ್ಷಗಳಿಗೆ ಕಳುಹಿಸಲಾಗುವುದು. ನ್ಯಾಯಯಾತ್ರೆ ಉತ್ತರ ಪ್ರದೇಶವನ್ನು ಫೆಬ್ರುವರಿ 16ರಂದು ಪ್ರವೇಶಿಸಲಿದೆ’ ಎಂದು ಮುಖಂಡ ಜೈರಾಂ ರಮೇಶ್‌ ಅವರು ಎಕ್ಸ್‌ ಜಾಲತಾಣದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT