ನವದೆಹಲಿ: ವಿರೋಧಪಕ್ಷಗಳ ಮೈತ್ರಿಕೂಟ ಇಂಡಿಯಾ ಕುರಿತು ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿ ಮೋದಿ ವಿರೋಧ ಪಕ್ಷಗಳನ್ನು ತೆಗಳುವುದಕ್ಕಾಗಿ ಸರ್ಕಾರಿ ಕಾರ್ಯಕ್ರಮವನ್ನು ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಟ್ವಿಟರ್)ನಲ್ಲಿ ಮೋದಿ ವಿರುದ್ಧ ಪೋಸ್ಟ್ ಹಂಚಿಕೊಂಡಿದ್ದಾರೆ.
'ಪ್ರಧಾನಿಯವರು ಯಾವ ಕೆಲಸವನ್ನು (ಮೂದಲಿಕೆ) ಚೆನ್ನಾಗಿ ಮಾಡುತ್ತಿದ್ದರೋ.. ಆ ಕೆಲಸಕ್ಕೆ ಹಿಂತಿರುಗಿದ್ದಾರೆ. ಇಂಡಿಯಾ ಪಕ್ಷಗಳನ್ನು 'ಘಮಂಡಿಯಾ' (ಸೊಕ್ಕಿನ) ಪಕ್ಷಗಳು ಎನ್ನುವ ಮೂಲಕ ಮತ್ತೆ ತೆಗಳಿಕೆ ಆರಂಭಿಸಿದ್ದಾರೆ' ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
'ನೋಡಿ, ಯಾರು ಮಾತನಾಡುತ್ತಿದ್ದಾರೆ! ವಿರೋಧ ಪಕ್ಷಗಳನ್ನು ಟೀಕಿಸಲು ಸರ್ಕಾರಿ ಕಾರ್ಯಕ್ರಮವನ್ನು ಬಳಸಿಕೊಳ್ಳುವ ವ್ಯಕ್ತಿ. ಅವರು ತಮ್ಮ ಸ್ಥಾನವನ್ನು ಕೀಳುಮಟ್ಟಕ್ಕೆ ಇಳಿಸಿ ಜಿಎ–ಎನ್‌ಡಿಎ (GA-NDA) –ಗೌತಮ್ ಅದಾನಿಯವರ ಎನ್‌ಡಿಎ ಮೈತ್ರಿಯನ್ನು ಮುನ್ನಡೆಸುತ್ತಿದ್ದಾರೆ ಎಂದು ಯಾರು ಬೇಕಾದರೂ ಹೇಳಬಹುದು' ಎಂದು ಕುಟುಕಿದ್ದಾರೆ.
ಇಂದು (ಗುರುವಾರ) ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಮೋದಿ, ಸುಮಾರು ₹ 50,700 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಇದೇ ವೇಳೆ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾವನ್ನು 'ಘಮಂಡಿಯಾ' (ಸೊಕ್ಕಿನ) ಒಕ್ಕೂಟ ಎಂದು ಮೂದಲಿಸಿದ್ದಾರೆ. ಜೊತೆಗೆ ಈ ಒಕ್ಕೂಟವು ಸನಾತನ ಧರ್ಮದ ಆಚಾರಗಳು ಮತ್ತು ಸಂಪ್ರದಾಯಗಳನ್ನು ಕೊನೆಗೊಳಿಸಲು ಬಯಸುತ್ತಿದೆ ಎಂದು ಕಿಡಿಕಾರಿದ್ದಾರೆ.
'ಘಮಂಡಿಯಾ ಒಕ್ಕೂಟದ ನಾಯಕರು ಇತ್ತೀಚೆಗೆ ಮುಂಬೈನಲ್ಲಿ ಸಭೆ ಸೇರಿದ್ದರು. ಅವರಿಗೆ ಯಾವುದೇ ಕಾರ್ಯನೀತಿ ಅಥವಾ ಯಾವೊಬ್ಬ ನಾಯಕನಿಲ್ಲ. ಅವರು ಸನಾತನ ಧರ್ಮದ ಮೇಲೆ ದಾಳಿ ನಡೆಸುವ ಹಾಗೂ ಅದನ್ನು ನಾಶ ಮಾಡುವ ಗುಪ್ತ ಕಾರ್ಯಸೂಚಿ ಹೊಂದಿದ್ದಾರೆ' ಎಂದು ಮೋದಿ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.