ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಇಡಿ ಕಸ್ಟಡಿಯನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮೂರು ದಿನಗಳವರೆಗೆ ವಿಸ್ತರಿಸಿದೆ.
ಈ ಹಿಂದೆ ನೀಡಲಾಗಿದ್ದ ನಾಲ್ಕು ದಿನಗಳ ಜಾರಿ ನಿರ್ದೇಶನಾಲಯದ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು (ಶುಕ್ರವಾರ) ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಖಾನ್ ಅವರನ್ನು ಇನ್ನೂ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯವು (ಇ.ಡಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು 3 ದಿನಗಳವರೆಗೆ ಕಸ್ಟಡಿ ಅವಧಿ ವಿಸ್ತರಿಸಿ ಆದೇಶ ನೀಡಿದ್ದಾರೆ.
ದೆಹಲಿಯ ಓಕ್ಲಾದಲ್ಲಿರುವ ಶಾಸಕರ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದರು. ಶೋಧದ ಸಮಯದಲ್ಲಿ ಖಾನ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ, ಅವರು ನುಣುಚಿಕೊಳ್ಳುವ ಉತ್ತರ ನೀಡಿದ್ದರಿಂದ, ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಅವರನ್ನು ಬಂಧಿಸಲಾಗಿತ್ತು.