ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಫೋಟೊ ತಬ್ಬಿ ಕಣ್ಣೀರಿಟ್ಟೆ: ನಿರ್ಭಯಾ ತಾಯಿ ಆಶಾದೇವಿ ಭಾವುಕ ಪ್ರತಿಕ್ರಿಯೆ

Last Updated 20 ಮಾರ್ಚ್ 2020, 1:51 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರಿಂಕೋರ್ಟ್‌ನಿಂದ ಹಿಂದಿರುಗಿದ ತಕ್ಷಣ ಮಗಳ ಫೋಟೊತಬ್ಬಿಕೊಂಡು ಕಣ್ಣೀರಿಟ್ಟೆ ಎಂದು ನಿರ್ಭಯಾ ತಾಯಿ ಆಶಾದೇವಿ ಹೇಳಿದ್ದಾರೆ.

ನಿರ್ಭಯಾ ಹಂತಕರಿಗೆ ಇಂದು ಮುಂಜಾನೆ 5.30ಕ್ಕೆ ಮರಣದಂಡನೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸತತ ಹೋರಾಟ ಮಾಡುತ್ತ ಬಂದಿರುವ ನಿರ್ಭಯಾ ತಾಯಿ ಆಶಾದೇವಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅತ್ಯಾಚಾರ ಎಸಗಿರುವ ಕಾಮುಕರಿಗೆ ತಕ್ಕ ಶಿಕ್ಷೆಯಾಗಿದೆ. ನಾಳೆ ಮುಂಜಾನೆ ಉದಯಿಸುವ ಸೂರ್ಯ ಹೊಸ ಭರವಸೆಗೆ ಸಾಕ್ಷಿಯಾಗುತ್ತಾನೆ. ನಮ್ಮ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ಕಿದೆ ಎಂದುನಿರ್ಭಯಾ ತಾಯಿತಿಳಿಸಿದ್ದಾರೆ.

ದೇಶದ ಮಹಿಳೆಯರು, ಯುವತಿಯರು, ಬಾಲಕಿಯರಿಗೆ ನ್ಯಾಯ ಸಿಕ್ಕದಿನ ಇದು ಎಂದಿರುವ ಅವರು, ‘ನಿರ್ಭಯಾ ಪ್ರಕರಣದಲ್ಲಿ ನ್ಯಾಯಾಂಗ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತು. ಅಪರಾಧಿಗಳ ಪ್ರತಿ ಮನವಿಯನ್ನೂ ವಿಚಾರಣೆ ನಡೆಸಿ, ನ್ಯಾಯ ನೀಡಿತು. ಇಂದು ಮಾರ್ಚ್ 20 ದೇಶದ ಇತಿಹಾಸದಲ್ಲಿ ಮಹತ್ವದ ದಿನ. 8 ವರ್ಷಗಳ ನಮ್ಮ ಹೋರಾಟಕ್ಕೆ ಫಲ ಸಿಕ್ಕ ದಿನ‘ ಎಂಬ ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ.

ನಿರ್ಭಯಾ ತಂದೆ ಬದ್ರಿನಾಥ್ಪ್ರತಿಕ್ರಿಯೆ

ಅಪರಾಧಿಗಳಿಗೆ ಮರಣದಂಡನೆ ಜಾರಿಗೊಳಿಸಿರುವ ವಿಚಾರವಾಗಿ ಮಾತನಾಡಿರುವ ನಿರ್ಭಯಾ ತಂದೆ ಬದ್ರಿನಾಥ್‌ ಅವರು, ’ಹೆಣ್ಣುಮಕ್ಕಳ ತಂದೆಯಂದಿರು ಒಂದು ಮಾತು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಮೌನವಾಗಿ ಸಹಿಸಿಕೊಳ್ಳಬೇಡಿ. ಮಗಳ ಪರವಾಗಿ ಗಟ್ಟಿಯಾಗಿ ನಿಂತು ಹೋರಾಡಿ. ಅವಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬೇಡಿ. ಅವಳಿಗೇನು ಬೇಕೋ ಅರ್ಥ ಮಾಡಿಕೊಳ್ಳಿ‘ ಎಂದು ಹೇಳಿದ್ದಾರೆ.

‘ಇದು ಕೇವಲ ನಿರ್ಭಯಾ ಒಬ್ಬಳ ಗೆಲುವಲ್ಲ. ದೇಶದಲ್ಲಿ ಮಹಿಳೆಯರನ್ನು ಹಿಂಸಿಸುವವರಿಗೆ ಎಚ್ಚರಿಕೆ ನೀಡುವ ದಿನ. ಒಬ್ಬ ತಂದೆಯಾಗಿ ಯೋಚಿಸಿದಾಗ ಗಲ್ಲಿಗೇರಿದವರ ಬಗ್ಗೆಯೂ ನನ್ನಲ್ಲಿ ಮರುಕ ಉಂಟಾಗುತ್ತದೆ. ಆದರೆ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ‘ ಎಂದು ಬದ್ರಿನಾಥ್‌ ಪ್ರತಿಪಾದಿಸಿದ್ದಾರೆ.

ಅಪರಾಧಿಗಳ ಪರ ವಕೀಲರ ಬಗ್ಗೆ ನನಗೆ ಸಿಟ್ಟಿಲ್ಲ ಎಂದಿರುವ ಅವರು ‘ಅವರ ಕೆಲಸ ಅವರು ಮಾಡಿದ್ದಾರೆ. ನಮ್ಮ ವಕೀಲರು ತಮ್ಮ ಕೆಲಸ ಪರಿಣಾಮಕಾರಿಯಾಗಿ ಮಾಡಿದರು. ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಬೇಕು. ಅದಕ್ಕಾಗಿ ಒಂದು ಹೋರಾಟ ರೂಪಿಸುತ್ತೇವೆ. ಕಾನೂನು ಸಂಘರ್ಷದ ವೇಳೆ ನಮಗೆ ಕಾನೂನಿನಲ್ಲಿರುವ ಲೋಪಗಳು ಅರಿವಾದವು. ನಾನು ಅಂಥವನ್ನು ಪಟ್ಟಿ ಮಾಡಿದ್ದೇನೆ. ಕಾನೂನು ಸಚಿವರು ಸೇರಿದಂತೆ ಸಂಬಂಧಿಸಿದವರನ್ನು ಭೇಟಿಯಾಗಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶೀಘ್ರ ಶಿಕ್ಷೆಯಾಗುವ ವ್ಯವಸ್ಥೆ ರೂಪಿಸುವಂತೆ ಮಾಡಲು ಪ್ರಯತ್ನಿಸುತ್ತೇನೆ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT