ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧನಕರ್‌ ಅಣಕಿಸಿದ ಟಿಎಂಸಿ ಸಂಸದ: ರಾಷ್ಟ್ರಪತಿ ಮುರ್ಮು, ಮೋದಿ ಆಘಾತ

Published 20 ಡಿಸೆಂಬರ್ 2023, 6:09 IST
Last Updated 20 ಡಿಸೆಂಬರ್ 2023, 6:09 IST
ಅಕ್ಷರ ಗಾತ್ರ

ನವದೆಹಲಿ: ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅಣಕಿಸಿದ ಪ್ರಸಂಗವು ಬುಧವಾರ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಯ ಕೇಂದ್ರಬಿಂದು ಆಗಿತ್ತು. ಈ ವಿಚಾರವು ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರಸ್ತಾಪ ಆಯಿತು. ಉಪ ರಾಷ್ಟ್ರಪತಿಯವರನ್ನು ಅಣಕಿಸಿದ್ದರ ಬಗ್ಗೆ ರಾಷ್ಟ್ರಪತಿ ದ್ರೌ‍ಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆಘಾತ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯ ಸಭಾಪತಿ ಕೂಡ ಆಗಿರುವ ಧನಕರ್ ಅವರು, ಸಂಸತ್ತಿಗೆ ಹಾಗೂ ಸಭಾಪತಿ ಸ್ಥಾನಕ್ಕೆ ಅವಮಾನ ಎಸಗುವುದನ್ನು ಸಹಿಸುವುದಿಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿದರು. ಕಲ್ಯಾಣ್ ಬ್ಯಾನರ್ಜಿ ಅವರು ತಾವು ಯಾರನ್ನೂ ನೋಯಿಸುವ ಉದ್ದೇಶ ಹೊಂದಿರಲಿಲ್ಲ ಎಂದು ತಿಳಿಸಿದ್ದಾರೆ. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಕಲ್ಯಾಣ್ ಬ್ಯಾನರ್ಜಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅಣಕ ಪ್ರಸಂಗವನ್ನು ಪ್ರಸ್ತಾಪಿಸುವ ಮೂಲಕ ಬಿಜೆಪಿಯು ಸಂಸದರ ಅಮಾನತು ವಿಚಾರದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

‘ಉಪರಾಷ್ಟ್ರಪತಿ ಅವರಿಗೆ ಸಂಸತ್ತಿನ ಆವರಣದಲ್ಲಿ ಅವಮಾನಿಸಿದ ಬಗೆಯನ್ನು ಕಂಡು ನನಗೆ ಆಘಾತ ಉಂಟಾಗಿದೆ’ ಎಂದು ರಾಷ್ಟ್ರಪತಿ ಹೇಳಿದ್ದಾರೆ.

‘ಚುನಾಯಿತ ಪ್ರತಿನಿಧಿಗಳು ತಮಗೆ ಅನ್ನಿಸಿದ್ದನ್ನು ಮುಕ್ತವಾಗಿ ಹೇಳಿಕೊಳ್ಳುವಂತೆ ಇರಬೇಕು. ಆದರೆ ಅವರ ಅಭಿವ್ಯಕ್ತಿಯು ಘನತೆ ಹಾಗೂ ಸೌಜನ್ಯದ ಚೌಕಟ್ಟನ್ನು ಮೀರಬಾರದು. ನಾವು ಹೆಮ್ಮೆಪಡುವ ಸಂಸದೀಯ ಪರಂಪರೆ ಹೀಗಿದೆ. ಇದನ್ನು ಚುನಾಯಿತ ಪ್ರತಿನಿಧಿಗಳು ಎತ್ತಿಹಿಡಿಯುವ ಕೆಲಸ ಮಾಡಲಿ ಎಂದು ದೇಶದ ಜನರು ನಿರೀಕ್ಷಿಸುತ್ತಾರೆ’ ಎಂದು ರಾಷ್ಟ್ರಪತಿಯವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರಿಂದ ಕರೆ ಬಂದಿತ್ತು. ಕೆಲವು ಸಂಸದರು ಕೀಳು ರೀತಿಯಲ್ಲಿ ಅಣಕಿಸಿದ್ದರಿಂದ ನೋವಾಗಿದೆ ಎಂದು ಅವರು ಹೇಳಿದರು. ಕಳೆದ ಇಪ್ಪತ್ತು ವರ್ಷಗಳಿಂದ ತಾವು ಕೂಡ ಇಂತಹ ಬಗೆಯ ಅವಮಾನಗಳನ್ನು ಎದುರಿಸುತ್ತಿರುವುದಾಗಿ, ಆದರೆ ಉಪ ರಾಷ್ಟ್ರಪತಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರಿಗೆ ಸಂಸತ್ತಿನಲ್ಲಿಯೇ ಹೀಗೆ ಆಗಿರುವುದು ದುರದೃಷ್ಟಕರ ಎಂಬುದಾಗಿ ಅವರು ಹೇಳಿದರು’ ಎಂದು ಧನಕರ್ ಅವರು ಹೇಳಿರುವುದಾಗಿ ಉಪರಾಷ್ಟ್ರಪತಿ ಅವರ ಎಕ್ಸ್‌ ಖಾತೆಯಲ್ಲಿ ಬರೆಯಲಾಗಿದೆ.

ಅಣಕಿಸಿದ ಪ್ರಸಂಗ ಕುರಿತಾಗಿ ಧನಕರ್ ಅವರು ರಾಜ್ಯಸಭೆಯಲ್ಲಿಯೂ ಆಕ್ರೋಶ ವ್ಯಕ್ತ‍ಪಡಿಸಿದರು. ‘ನನ್ನನ್ನು ಯಾರಾದರೂ ಅಣಕಿಸಿದರೆ ನಾನು ಚಿಂತೆ ಮಾಡುವುದಿಲ್ಲ. ಆದರೆ ನಾನು ಹೊಂದಿರುವ ಹುದ್ದೆಯ ಗೌರವವನ್ನು ರಕ್ಷಿಸಿಕೊಳ್ಳಲು ಆಗಲಿಲ್ಲ ಎಂಬುದನ್ನು ನನಗೆ ಸಹಿಸಲು ಆಗದು. ಸದನದ ಘನತೆಯನ್ನು ಕಾಯುವುದು ನನ್ನ ಹೊಣೆಯೂ ಹೌದು’ ಎಂದು ಹೇಳಿದರು.

ಧನಕರ್ ಅವರನ್ನು ಭೇಟಿ ಮಾಡಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ‘ಅಣಕಿಸುವುದು ಅಪರಾಧ ಅಲ್ಲ. ಬಿಜೆಪಿಯವರು ಮುಖ್ಯವಾದ ವಿಚಾರದ ಮೇಲಿನ ಗಮನವನ್ನು ಇನ್ನೊಂದೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ’ ಎಂದು ಕಲ್ಯಾಣ್ ಬ್ಯಾನರ್ಜಿ ಹೇಳಿದ್ದಾರೆ.

ನನ್ನನ್ನು ಅಣಕಿಸಿದ್ದು ಹಾಗೂ ಅದನ್ನು ಚಿತ್ರೀಕರಿಸಿಕೊಂಡಿದ್ದು ಉಪರಾಷ್ಟ್ರಪತಿ ಹುದ್ದೆಗೆ, ರೈತರಿಗೆ ಹಾಗೂ ನನ್ನ ಸಮುದಾಯಕ್ಕೆ ಅವಮಾನ ಎಸಗಿದಂತೆ 
–ಜಗದೀಪ್ ಧನಕರ್, ರಾಜ್ಯಸಭಾ ಸಭಾಪತಿ, ಉಪರಾಷ್ಟ್ರಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT