ಚೆನ್ನೈ(ತಮಿಳುನಾಡು): ಇಲ್ಲಿನ ಶ್ರೀನಿವಾಸ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಭೇಟಿ ನೀಡಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಘನತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಘನ ತ್ಯಾಜ್ಯ ನಿರ್ವಹಣೆ ಹಾಗೂ ಕಸದಿಂದ ಅನಿಲ ಉತ್ಪಾದನೆಯ ಬಗ್ಗೆ ತಿಳಿದುಕೊಳ್ಳಲು 15 ಮಂದಿ ಅಧಿಕಾರಿಗಳೊಂದಿಗೆ ಬಂದಿದ್ದೇನೆ. ಇಲ್ಲಿನ ಉತ್ತಮ ಅಂಶಗಳನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳಲಾಗುವುದು’ ಎಂದರು.
ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ದೇವರ ದಯೆಯಿಂದ ಉತ್ತಮ ಮಳೆಯಾಗಿದ್ದು, ಎರಡು ರಾಜ್ಯಗಳಿಗೂ ಸಹಾಯವಾಗಿದೆ. ಮೇಕೆದಾಟು ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಉಪಯೋಗವಾಗಲಿದೆ’ ಎಂದು ಹೇಳಿದರು.