ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ಪಡೆಯಲು ಅವಕಾಶ: ಕೇಂದ್ರ ಸರ್ಕಾರ ಆದೇಶ

Published 4 ಸೆಪ್ಟೆಂಬರ್ 2024, 13:39 IST
Last Updated 5 ಸೆಪ್ಟೆಂಬರ್ 2024, 3:36 IST
ಅಕ್ಷರ ಗಾತ್ರ

ನವದೆಹಲಿ: ಇಪಿಎಸ್ ಪಿಂಚಣಿದಾರರಿಗೆ ಮುಂದಿನ ವರ್ಷದ ಜನವರಿ 1ರಿಂದ ದೇಶದ ಯಾವುದೇ ಭಾಗದಲ್ಲಿ, ಯಾವುದೇ ಬ್ಯಾಂಕ್‌ ಮತ್ತು ಯಾವುದೇ ಶಾಖೆಯಿಂದಾದರೂ ತಮ್ಮ ಪಿಂಚಣಿ ಪಡೆಯಲು ಅವಕಾಶ ದೊರೆಯಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ತಿಳಿಸಿದ್ದಾರೆ.

ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯ (ಸಿಪಿಪಿಎಸ್‌) ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಅದರಿಂದ ಈ ಸೌಲಭ್ಯ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಈ ನಿರ್ಧಾರದಿಂದ ಸುಮಾರು 78 ಲಕ್ಷ ಇಪಿಎಸ್‌ ಪಿಂಚಣಿದಾರರಿಗೆ ಉಪಯುಕ್ತವಾಗಲಿದೆ ಎಂದು ಮಾಹಿತಿ ನೀಡಿದ ಅವರು, ಮುಂದಿನ ಹಂತದಲ್ಲಿ ಅದನ್ನು ಆಧಾರ್‌ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್‌) ಪರಿವರ್ತಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಿಪಿಪಿಎಫ್‌ನ ಅನುಮೋದನೆಯು ಇಪಿಎಫ್‌ಒ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲಾಗುತ್ತದೆ. ಈ ಮೂಲಕ ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲೀನ ಸವಾಲುಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅಲ್ಲದೆ ತಡೆರಹಿತ ಪಾವತಿಯೂ ಇದರಿಂದ ಸಾಧ್ಯವಾಗುತ್ತದೆ ಎಂದಿದ್ದಾರೆ. 

ಪಿಂಚಣಿದಾರರು ಒಂದೆಡೆಯಿಂದ ಮತ್ತೊಂದೆಡೆಗೆ ಸ್ಥಳಾಂತರವಾದಾಗ ಪಿಂಚಣಿ ಪಾವತಿ ಆದೇಶವನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಅಗತ್ಯವಿಲ್ಲ. ಬ್ಯಾಂಕ್‌ ಅಥವಾ ಶಾಖೆಯನ್ನು ಬದಲಿಸುವ ಅಗತ್ಯವೂ ಇರುವುದಿಲ್ಲ. ದೇಶದಾದ್ಯಂತ ಪಿಂಚಣಿ ವಿತರಣೆಯನ್ನು ಸಿಪಿಪಿಎಸ್‌ ಖಚಿತಪಡಿಸುತ್ತದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಪಿಂಚಣಿ ಅರಂಭದ ಸಂದರ್ಭದಲ್ಲಿ, ಪಿಂಚಣಿದಾರರು ಪರಿಶೀಲನೆಗಾಗಿ ಯಾವುದೇ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಪಿಂಚಣಿ ಬಿಡುಗಡೆಯಾದ ಕೂಡಲೇ ಅದು ಜಮೆ ಆಗುತ್ತದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT