ಪಟ್ನಾ: ಬಿಹಾರ ಮುಖ್ಯಮಂತ್ರಿ ಕಚೇರಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜುಲೈ 16ರಂದು ಬೆದರಿಕೆ ಇ –ಮೇಲ್ ಬಂದಿರುವುದಾಗಿ ಸಚಿವಾಲಯದ ಹೇಳಿಕೆ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಇಮೇಲ್ ಕಳುಹಿಸಿದವನು ತಾನು ಅಲ್-ಖೈದಾದೊಂದಿಗೆ ಸಂಬಂಧ ಹೊಂದಿದ್ದು, ಮುಖ್ಯಮಂತ್ರಿ ಕಚೇರಿ ಆವರಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಹೇಳಿದ್ದಾನೆ. ಇದು ಹಳೆಯ ಪ್ರಕರಣವಾಗಿದ್ದು, ವಿಚಾರಣೆಯ ಬಳಿಕ ಆಗಸ್ಟ್ 2 ರಂದು ಎಫ್‌ಐಆರ್ ದಾಖಲಿಸಿದ್ದೇವೆ’ ಎಂದು ಪಟ್ನಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಬಿಹಾರ ಪೊಲೀಸ್ ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (ಎಸ್‌ಸಿಆರ್‌ಬಿ) ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಫ್‌ಐಆರ್ ಪ್ರತಿ ಪ್ರಕಾರ, ಭಾರತೀಯ ನ್ಯಾಯ ಸಂಹಿತೆ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.