ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಮೆಟ್ರೊಮ್ಯಾನ್‌ಗೆ ಮುನ್ನಡೆ, ಬಂಗಾಳದಲ್ಲಿ ದೀದಿಗೆ ಹಿನ್ನಡೆ

Last Updated 2 ಮೇ 2021, 7:22 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಪಾಲಕ್ಕಾಡ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 'ಮೆಟ್ರೊಮ್ಯಾನ್‌' ಇ. ಶ್ರೀಧರನ್ 6,700ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ.

ಮಾಜಿ ರಾಜ್ಯಪಾಲ, ಬಿಜೆಪಿ ಮುಖಂಡ ಕುಮ್ಮನಂ ರಾಜಶೇಖರನ್‌ ಹಾಗೂ ತ್ರಿಸೂರ್‌ನ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಮುನ್ನಡೆ ಸಾಧಿಸಿದ್ದಾರೆ. ಕೇರಳದಲ್ಲಿ ಒಟ್ಟು ಮೂರು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಒಟ್ಟು ವಿಧಾನಸಭೆ ಕ್ಷೇತ್ರಗಳ ಪೈಕಿ ಆಡಳಿತಾರೂಢ ಎಲ್‌ಡಿಎಫ್‌ ಮೈತ್ರಿಕೂಟವು ಮುನ್ನಡೆ ಸಾಧಿಸಿದೆ. ಮುಖ್ಯಮಂತ್ರಿ, ಸಿಪಿಎಂ ಅಭ್ಯರ್ಥಿ ಪಿಣರಾಯಿ ವಿಜಯನ್‌ 24 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೇರಳದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ಓಮನ್‌ ಚಾಂಡಿ ಮುನ್ನಡೆಯಲಿದ್ದಾರೆ. ಎಲ್‌ಡಿಎಫ್‌ ಮೈತ್ರಿಕೂಟ 95, ಯುಡಿಎಫ್‌ 45 ಹಾಗೂ ಬಿಜೆಪಿ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಪಶ್ಚಿಮ ಬಂಗಾಳ: ಮಮತಾಗೆ ಹಿನ್ನಡೆ, ಟಿಎಂಸಿ ಮುನ್ನಡೆ

ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಗಿದಿದ್ದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ತಮ್ಮ ಪ್ರತಿಸ್ಪರ್ಧಿ ಟಿಎಂಸಿ ಅಭ್ಯರ್ಥಿ ಮಮತಾ ಬ್ಯಾನರ್ಜಿ ಅವರಿಗಿಂತ 3710 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಸುವೇಂದು ಅಧಿಕಾರಿ 27,640 ಮತಗಳನ್ನು ಪಡೆದಿದ್ದರೆ, ಮಮತಾ ಬ್ಯಾನರ್ಜಿ 23,930 ಮತಗಳನ್ನು ಪಡೆದಿದ್ದಾರೆ. ಮತ ಎಣಿಕೆ ಆರಂಭದ ಸುತ್ತಿಗೆ ಹೋಲಿಸಿದರೆ, ಪ್ರತಿಸ್ಪರ್ಧಿಗಳ ನಡುವಿನ ಮತಗಳ ಅಂತರ ಗಮನಾರ್ಹವಾಗಿ ಕಡಿಮೆಯಾಗಿದೆ.

ಕೋವಿಡ್‌ನಿಂದ ಮೃತಪಟ್ಟಿದ್ದ ಟಿಎಂಸಿ ಅಭ್ಯರ್ಥಿ ಕಾಜಲ್ ಸಿನ್ಹಾ ಖರ್ದಾ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕೇಂದ್ರ ಸಚಿವ, ಬಿಜೆಪಿಯ ಬಾಬುಲ್‌ ಸುಪ್ರಿಯೊಗೆ ಹಿನ್ನಡೆಯಾಗಿದೆ. ಒಟ್ಟು 292 ವಿಧಾನಸಭಾ ಕ್ಷೇತ್ರಗಳ ಪೈಕಿ ಟಿಎಂಸಿ 187 ಹಾಗೂ ಬಿಜೆಪಿ 85 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ತಮಿಳುನಾಡು ಚುನಾವಣೆ: ಕಮಲ್‌ ಹಾಸನ್‌ ಮುನ್ನಡೆ

ಡಿಎಂಕೆ ಅಭ್ಯರ್ಥಿ ಎಂ.ಕೆ.ಸ್ಟಾಲಿನ್ ಅವರು ಕೊಲತೂರ್ ಕ್ಷೇತ್ರದಲ್ಲಿ ಮತ್ತು ಉದಯನಿಧಿ ಸ್ಟಾಲಿನ್‌ ಮುನ್ನಡೆ ಸಾಧಿಸಿದ್ದಾರೆ. ಕೋವಿಲ್ಪಟ್ಟಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಎಎಂಎಂಕೆ ಮುಖ್ಯಸ್ಥ ಟಿಟಿವಿ ದಿನಕರನ್‌ಗೆ ಹಿನ್ನಡೆಯಾಗಿದೆ. ಎಐಎಡಿಎಂಕೆಯ ಇ.ಕೆ.ಪಳನಿಸ್ವಾಮಿ ಮುನ್ನಡೆಯಲಿದ್ದರೆ, ಒ.ಪನ್ನೀರ್‌ಸೆಲ್ವಂ ಹಿನ್ನಡೆ ಅನುಭವಿಸಿದ್ದಾರೆ.

ಎಂಎನ್‌ಎಂ ಪಕ್ಷದ ಮುಖ್ಯಸ್ಥ ಕಮಲ್‌ ಹಾಸನ್‌ ಮುನ್ನಡೆ ಕಾಯ್ದುಕೊಂಡಿದ್ದಾರೆ. ತಮಿಳುನಾಡಿನ ಥೌಸೆಂಡ್ ಲೈಟ್ಸ್ ಕ್ಷೇತ್ರದ ಡಿಎಂಕೆ ಅಭ್ಯರ್ಥಿ ಎಳಿಲನ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಖುಷ್ಬೂ ಸುಂದರ್ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ.

ಡಿಎಂಕೆ 133 ಕ್ಷೇತ್ರಗಳು, ಎಐಎಡಿಎಂಕೆ 97 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಅಸ್ಸಾಂ ವಿಧಾನಸಭೆ: ಸ್ಪಷ್ಟ ಬಹುಮತದತ್ತ ಬಿಜೆಪಿ

ಅಸ್ಸಾಂನಲ್ಲಿ ಎನ್‌ಡಿಎ 81 ಸ್ಥಾನಗಳಲ್ಲಿ ಹಾಗೂ ಯುಪಿಎ 44 ಸ್ಥಾನಗಳಲ್ಲಿ ಮುಂದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 86 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಸ್ಸಾಂನಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ ನೇತೃತ್ವದ ಮೈತ್ರಿಕೂಟ ಸಾಗಿದ್ದು ನಾವು ಅಧಿಕಾರ ಉಳಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸರ್ಬಾನಂದ್‌ ಸೊನೊವಾಲ್‌ ಹೇಳಿದ್ದಾರೆ.

ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟವು 9 ಕ್ಷೇತ್ರಗಳು, ಕಾಂಗ್ರೆಸ್‌ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಉಪಚುನಾವಣೆಗಳು...

ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ (ಪ.ಜಾತಿ) ವೈಎಸ್ಆರ್ ಕಾಂಗ್ರೆಸ್‌ನ ಗುರುಮೂರ್ತಿಗೆ ಭಾರಿ ಮುನ್ನಡೆ. ತೆಲುಗುದೇಶಂ‌ನ ಪನಬಾಕ ಲಕ್ಷ್ಮಿಗೆ ಹಿನ್ನಡೆಯಾಗಿದೆ ಹಾಗೂ ರತ್ನಪ್ರಭಾ ಠೇವಣಿ ಕಳೆದುಕೊಳ್ಳುವ ಸಾಧ್ಯತೆ ಇದೆ.

ಮಧ್ಯಪ್ರದೇಶದ ದಮೋಹ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಅಜಯ್‌ ಟಂಡನ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರಾಹುಲ್ ಸಿಂಗ್ ಲೋಧಿ ಅವರಿಗಿಂತ 700 ಮತಗಳಷ್ಟು ಮುಂದಿದ್ದಾರೆ. ರಾಹುಲ್ ಲೋಧಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ, ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT