ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು ಮತ್ತು ಕೇರಳ: ಅಪಾಯದಲ್ಲಿದ್ದ ಸಾಕು ಪ್ರಾಣಿಗಳ ರಕ್ಷಣೆ

Last Updated 22 ಆಗಸ್ಟ್ 2018, 15:35 IST
ಅಕ್ಷರ ಗಾತ್ರ

ತಿರುವನಂತಪುರ/ಮಡಿಕೇರಿ: ಕೊಡಗು ಮತ್ತು ಕೇರಳದಲ್ಲಿ ಮಳೆ ಇಳಿಮುಖವಾಗಿದ್ದು ಸಾಕು ಪ್ರಾಣಿಗಳ ರಕ್ಷಣಾ ಕಾರ್ಯ ನಡೆಯುತ್ತಿದೆ.

ಪ್ರಾಣಿ ದಯಾ ಸಂಘಟನೆಗಳು, ಪ್ರಾಣಿ ಕಲ್ಯಾಣ ಸಂಸ್ಥೆಗಳ ಕಾರ್ಯಕರ್ತರು ಸಾಕು ಪ್ರಾಣಿಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನೆರೆಗೆ ತುತ್ತಾಗಿ ಮುರಿದು ಬಿದ್ದಿರುವ ಮನೆಗಳಲ್ಲಿ ಕಟ್ಟಿ ಹಾಕಿದ ನಾಯಿಗಳು, ಜಾನುವಾರಗಳು ಬಳಲಿದ್ದವು, ಅವು ಸಹಾಯಕ್ಕಾಗಿ ಕಾಯುತ್ತಿದ್ದವು ಅವುಗಳ ರಕ್ಷಣೆಗೆ ಸ್ಥಳೀಯರು ಸಹಕರಿಸಿದರು ಎಂದು ಪಶುವೈದ್ಯೆ ಡಾ.ಸುರಂಜನಾ ಹೇಳುತ್ತಾರೆ.

ಡಾ.ಸುರಂಜನಾ ಅವರು ನಾಲ್ವರು ಪ್ರಾಣಿದಯಾ ಸಂಸ್ಥೆಗಳ ಕಾರ್ಯಕರ್ತರ ಜತೆಭಾನುವಾರ ಕೊಡಗಿಗೆ ತೆರಳಿದ್ದರು. ಅವರು ಗಾಯಗೊಂಡ ಸಾಕು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ, ಅಪಾಯದಲ್ಲಿದ್ದ ಪ್ರಾಣಿಗಳನ್ನು ರಕ್ಷಣೆ ಮಾಡಲಾಯಿತು ಎಂದು ಅವರು ತಿಳಿಸುತ್ತಾರೆ.

ಡಾ.ಸುರಂಜನಾ ನೇತೃತ್ವದ ತಂಡವನ್ನು ಬೆಂಗಳೂರಿನ ಸಿಯುಪಿಎ ಪ್ರಾಣಿ ಕಲ್ಯಾಣ ಸಂಸ್ಥೆ ಕೊಡಗಿಗೆ ಕಳುಹಿಸಿ ಕೊಟ್ಟಿತ್ತು. ಈ ಕುರಿತಂತೆ ಡಾ.ಸುರಂಜನಾ ಅವರನ್ನು ಮಾತನಾಡಿಸಿ ದಿ ನ್ಯೂಸ್‌ ಮಿನಿಟ್‌ ಸುದ್ದಿ ತಾಣ ಸುದ್ದಿ ಮಾಡಿದೆ. ನಡುಗಡ್ಡೆಯಂತಾಗಿರುವ ಕೊಡಗಿನಲ್ಲಿ ಗುಡ್ಡಗಳು, ಮುರಿದು ಬಿದ್ದಿರುವ ಮನೆಗಳು, ಕೆಸರಿನಲ್ಲಿ ಸಿಲುಕಿದ್ದ ಪ್ರಾಣಿಗಳನ್ನು ರಕ್ಷಣೆ ಮಾಡಿದ್ದರ ಬಗ್ಗೆ ಅವರು ವಿವರಿಸಿದ್ದಾರೆ.

ನಮ್ಮ ಸಿಯುಪಿಎ ತಂಡ ಮೊದಲಿಗೆ ಬೈಲುಕುಪ್ಪೆಗ ತೆರಳಿತು. ಅಲ್ಲಿ ಹಸುವಿನ ಕರುವನ್ನು ರಕ್ಷಣೆ ಮಾಡಲಾಯಿತು. ನಂತರ ಹಸಿದ 10 ಹಸುಗಳನ್ನು ರಕ್ಷಣೆ ಮಾಡಿ ಅವುಗಳನ್ನು ಹೆಬ್ಬಾಲೆ ಗೋಶಾಲೆಗೆ ರವಾನಿಸಲಾಯಿತು. ನಿರಾಶ್ರಿತರ ಕೇಂದ್ರಗಳಲ್ಲಿದ್ದ ಜನರು ಸ್ವಯಂ ಪ್ರೇರಿತರಾಗಿ ಬಂದು ಅಪಾಯದಲ್ಲಿದ್ದ ಪ್ರಾಣಿಗಳ ರಕ್ಷಣೆಗೆ ಸಹಾಯ ಮಾಡಿದರು ಎಂದುಡಾ.ಸುರಂಜನಾ ಹೇಳುತ್ತಾರೆ.

’ನಮ್ಮ ಪ್ರವಾಹ ಪೀಡಿತ ಮನೆಗಳಲ್ಲಿಯೇ ಶ್ವಾನಗಳು ಮತ್ತು ಜಾನುವಾರುಗಳನ್ನು ಕಟ್ಟಿ ಹಾಕಿ ಬಂದಿರುವುದಾಗಿಇಲ್ಲಿನ ಸಾಕಷ್ಟು ಜನರು ಹೇಳುತ್ತಿದ್ದರು, ಅವರು ಪ್ರವಾಹದಂತಹ ಸ್ಥಿತಿಯಲ್ಲಿ ಪ್ರಾಣಿಗಳನ್ನು ಕಟ್ಟಿ ಹಾಕದೇ ಅವುಗಳನ್ನು ಬಿಟ್ಟು ಬಿಡಬೇಕು, ಅವರು ಯಾಕೆ ಕಟ್ಟಿ ಹಾಕಿದರು ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಅವರು ಅಸಹಾಯಕತೆಯಿಂದ ನುಡಿಯುತ್ತಾರೆ.

ಇಲ್ಲಿನ ಬಹುತೇಕ ಶ್ವಾನಗಳು ಕಾವಲು ನಾಯಿಗಳು. ಅಕ್ರಮಣಕಾರಿಯಾಗಿದ್ದ ಈ ಶ್ವಾನಗಳು ಮಳೆಯ ಪ್ರಭಾವದಿಂದ ಕುಗ್ಗಿ ಹೋಗಿದ್ದವು. ಸೋಮವಾರದ ಮಧ್ಯಾಹ್ನದ ವೇಳೆಗೆ ರಕ್ಷಣೆ ಮಾಡಿದ್ದ ಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ್ದ ಕಾರ್ಯಕರ್ತರು ಮತ್ತು ಸ್ಥಳೀಯರು ಈ ಕಾರ್ಯಕ್ಕೆ ನೆರವಾದರು ಎಂದುಡಾ.ಸುರಂಜನಾ ಹೇಳುತ್ತಾರೆ.

ಕೇರಳದಲ್ಲೂ ಪ್ರಾಣಿಗಳ ರಕ್ಷಣೆ...

ವಯನಾಡು ಅತಿ ಹೆಚ್ಚು ನೆರೆ ಹಾವಳಿಗೆ ತುತ್ತಾಗಿರುವ ಕೇರಳದ ಜಿಲ್ಲೆಯಾಗಿದೆ. ಇಲ್ಲಿ 220 ನಿರಾಶ್ರಿತರ ಕೇಂದ್ರಗಳಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ.ಭಾರತೀಯ ಪಶುವೈದ್ಯ ಸಂಸ್ಥೆಯ ಡಾ.ಸತೀಶ್‌ ನೇತೃತ್ವದ ತಂಡದಿಂದ ಇಲ್ಲಿ ಸಾಕಷ್ಟು ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ.

ಇಲ್ಲಿ, ಸಾವಿರಾರು ಕೋಳಿಗಳು, 45 ಮೇಕೆ ಹಾಗೂ 36 ಹಸುಗಳು ಪ್ರವಾಹಕ್ಕೆ ಬಲಿಯಾಗಿದ್ದವು. 1000 ಕ್ಕೂ ದನಗಳನ್ನು ರಕ್ಷಣೆ ಮಾಡಲಾಗಿದ್ದು ಅವುಗಳಿಗೆ ಮೇವಿನ ಅಗತ್ಯವಿದೆ ಎಂದು ಡಾ.ಸತೀಶ್‌ ಹೇಳುತ್ತಾರೆ.

ಎಚ್‌ಎಸ್‌ಐ ಎಂಬ ಪ್ರಾಣಿ ಕಲ್ಯಾಣ ಸಂಸ್ಥೆ ಮಲ್ಲಪ್ಪುರಂನ ನಿಲಾಂಬುರ್ ತಾಲ್ಲೂಕಿನಲ್ಲಿ ಹಲವು ಪ್ರಾಣಿಗಳನ್ನು ರಕ್ಷಣೆ ಮಾಡಿದೆ. ಅವುಗಳನ್ನು ಇಲ್ಲಿನ ಮೂರು ಕ್ಯಾಂಪ್‌ಗಳಿಗೆ ರವಾನಿಸಲಾಗಿದೆ. ಪ್ರವಾಹದ ಸೂಚನೆ ಸಿಕ್ಕ ಕೂಡಲೇ ಜನರು ಸಾಕು ಪ್ರಾಣಿಗಳನ್ನು ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಕೆಲವರು ಪ್ರಾಣಿಗಳನ್ನು ಕರೆತಂದಿದ್ದರೂ ರಕ್ಷಣ ಸಿಬ್ಬಂದಿಗಳು ಅವುಗಳನ್ನು ದೋಣಿಗಳ ಒಳಗೆ ಬಿಡಲಿಲ್ಲ ಎಂದು ಸಂತ್ರಸ್ತೆಯೊಬ್ಬರು ತಿಳಿಸಿದ್ದಾರೆ.

ನಮ್ಮ ಕಾರ್ಯಕರ್ತರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಮನೆಗಳು ಹಾಳಾಗಿದ್ದವು, ಇಲ್ಲಿನ ಅವಶೇಷಗಳಲ್ಲಿದ್ದ ಕೆಲವು ಶ್ವಾನಗಳು ನಿತ್ರಾಣವಾಗಿ ಬೊಗಳುತ್ತಿರುವುದು ಕೇಳುತ್ತಿತ್ತು ಎಂದು ಎಚ್‌ಎಸ್‌ಐನ ಕಾರ್ಯಕರ್ತೆ ಸ್ಯಾಲಿ ವರ್ಮಾ ಹೇಳುತ್ತಾರೆ.

ನಮ್ಮ ತಂಡ ಸಾಕಷ್ಟು ಶ್ರಮವಹಿಸಿ ಬೀಳುತ್ತಿರುವ ಮಳೆಯ ನಡುವೆಯೂ ಐದು ನಾಯಿ ಮತ್ತು ಎರಡು ನಾಯಿ ಮರಿಗಳನ್ನು ರಕ್ಷಣೆ ಮಾಡಲಾಯಿತು ಎಂದು ಸ್ಯಾಲಿ ವರ್ಮಾ ಹೇಳುತ್ತಾರೆ.

ನಮ್ಮ ತಂಡ ತ್ರಿಶ್ಯೂರ್‌ನಲ್ಲಿ 20 ಮೇಕೆಗಳು ಮತ್ತು 8 ಹಸುಗಳನ್ನು ರಕ್ಷಣೆ ಮಾಡಿತು, ಅವು ಕಟ್ಟಿದ ಸ್ಥಿತಿಯಲ್ಲಿದ್ದವು, ತಲೆಯನ್ನು ಹೊರತು ಪಡಿಸಿದರೆ ಅವುಗಳ ದೇಹ ನೀರಿನಲ್ಲಿ ಮುಳುಗಿತ್ತು. ಹಲವು ದಿನಗಳಿಂದ ಅವು ಮೇವು ಸೇವಿಸಿರಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ಚೆನ್ನೈ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದರ ಮುಖ್ಯಸ್ಥೆ ಜೆನ್ನಿಫರ್ ಜಾಕಬ್‌ ನೇತೃತ್ವದ ತಂಡದ ಕಾರ್ಯಕರ್ತರು ಮತ್ತು ಎನ್‌ಡಿಆರ್‌ಎಫ್‌ ಸದಸ್ಯರ ನೆರವಿನಿಂದ ನಾಲ್ಕು ದೋಣಿಗಳಲ್ಲಿ ಪ್ರಾಣಿಗಳನ್ನು ರಕ್ಷಣೆ ಮಾಡಿದ್ದಾರೆ. ಇಡುಕ್ಕಿ ಜಿಲ್ಲೆಯ ಚೆಂಗನೂರಿನಲ್ಲಿ ಸಾಕಷ್ಟು ಪ್ರಾಣಿಗಳು ಸಾವನ್ನಪಿದ್ದವು ಎಂದು ಅವರು ಮಾಹಿತಿ ನೀಡಿದರು.

ಕೊಟ್ಟಯಂನಲ್ಲಿ 18 ಶ್ವಾನಗಳನ್ನು ರಕ್ಷಣೆ ಮಾಡಲಾಯಿತು. ಇವುಗಳಲ್ಲಿ ಕೆಲವು ನಾಯಿಗಳು ಪಂಜರದಲ್ಲಿ ಬಂಧಿಯಾಗಿದ್ದವು. ರಕ್ಷಿಸಿದ ಶ್ವಾನಗಳಿಗೆ ಆಹಾರ ನೀಡಿ, ವೈದ್ಯಕೀಯ ಚಿಕಿತ್ಸೆ ಕಲ್ಪಿಸಲಾಯಿತು. ಇಲ್ಲಿಂದ ಚೆಂಗನ್ನೂರಿಗೆ ತೆರಳಿ ಅಲ್ಲಿಯೂ 50 ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪ್ರಾಣಿ ಕಲ್ಯಾಣ ಸಂಸ್ಥೆಗಳ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.

ಪ್ರಾಣಿಗಳ ಪುನರ್ವಸತಿಗೆ ನೆರವು ನೀಡುವವರು ಈ ಕೆಳಕಂಡ ಪ್ರಾಣಿ ದಯಾ ಸಂಸ್ಥೆಗಳನ್ನು ಸಂಪರ್ಕಿಸಬಹುದು.

1) ಎಚ್‌ಎಸ್‌ಐ ಸಂಸ್ಥೆಯ ವೆಬ್‌ ವಿಳಾಸ:www.supporthsi.in

2) ಸಿಯುಪಿಎ ಸಂಸ್ಥೆಯ ವೆಬ್‌ ವಿಳಾಸ:http://cupabangalore.org/donate-now

3) ಮೈಸೂರಿನ ವೂಫ್‌ ವ್ಯಾಗನ್‌ ಕ್ಲಿನಿಕ್‌ : ಮೊಬೈಲ್‌ ಸಂಖ್ಯೆ:97414 58583

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT