ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣಿ‍ಪುರ: ಪೊಲೀಸ್–ಕುಕಿ ಸಮುದಾಯದವರ ನಡುವೆ ಗುಂಡಿನ ಚಕಮಕಿ

Published 10 ಜುಲೈ 2024, 5:57 IST
Last Updated 10 ಜುಲೈ 2024, 5:57 IST
ಅಕ್ಷರ ಗಾತ್ರ

ಗುವಾಹಟಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕುಕಿ ಸಮುದಾಯ ಅಧಿಕವಿರುವ ಕಾಂಗ್‌ಪೋಪ್ಕಿ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಹಾಗೂ ಕುಕಿ ಶಸಸ್ತ್ರಧಾರಿ ವ್ಯಕ್ತಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಬಂಧಿತರು ಗ್ರಾಮದ ಸ್ವಯಂ ಸೇವಕರಾಗಿದ್ದು, ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಕಾಂಗ್‌ಪೋಪ್ಕಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮೂವರನ್ನು ಕೈತೆಲೆಂಬಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್. ಹೆಂಗ್‌ಜೊಲ್ ಗ್ರಾಮದಲ್ಲಿ ಬಂಧಿಸಲಾಗಿತ್ತು.

ರಾಷ್ಟ್ರೀಯ ತನಿಖಾ ದಳ ನೀಡಿದ್ದ ಗುಪ್ತಚರ ಮಾಹಿತಿಯನ್ನು ಆಧರಿಸಿ ಮಣಿಪುರ ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದರು. ಬಂಧಿತರು ಭೂಗತ ಸಂಸ್ಥೆಯೊಂದಕ್ಕೆ ಸೇರಿದವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರು ಈ ಹಿಂದೆ ನಡೆದ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಅವರಿಂದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ಕಾನೂನು ಕ್ರಮಕ್ಕೆ ಅವರನ್ನು ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಸ್ತ್ರಸಜ್ಜಿತ ಉಗ್ರರು ಗುಂಡು ಹಾರಿಸಿದಾಗ ಮತ್ತು ಕಾರ್ಯಾಚರಣೆಗೆ ನಾಗರಿಕರು ಅಡ್ಡಿಪಡಿಸಿದಾಗ ಭದ್ರತಾ ಪಡೆಗಳು ಗರಿಷ್ಠ ಸಂಯಮ ಪ್ರದರ್ಶಿಸಿದವು. ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಬೇಕಾಯಿತು ಎಂದು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಒಂದು ಎಂಕೆ–3 ರೈಫಲ್, ಒಂದು ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡರ್ ಬಂದೂಕು ಹಾಗೂ 1,382 ಸುತ್ತುಗಳ ಮದ್ದುಗುಂಡುಗಳನ್ನು ಕಾರ್ಯಾಚರಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೈತೇಯಿ ಸಮುದಾಯದವರ ದಾಳಿಯಿಂದ ಕುಕಿಗಳನ್ನು ರಕ್ಷಣೆ ಮಾಡಲು ಇದ್ದ ಗ್ರಾಮದ ಸ್ವಯಂಸೇವಕರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಹೇಳಿದಂತೆ ದಂಗೆಕೋರ ಗುಂಪಿಗೆ ಸೇರಿದವರಲ್ಲ ಎಂದು ಕುಕಿ ಸಂಘಟನೆಗಳಾದ ‘ಕುಕಿ ಇನ್ಪಿ’ ಹಾಗೂ ‘ಬುಡಕಟ್ಟು ಒಗ್ಗಟ್ಟು ಸಮಿತಿ’ ಹೇಳಿದೆ. ಅಲ್ಲದೆ ಪೊಲೀಸರ ಈ ಕೃತ್ಯ ಖಂಡಿಸಿ ಈ ಎರಡು ಸಂಘಟನೆಗಳು ಮಂಗಳವಾರ 12 ಗಂಟೆಗಳ ಬಂದ್‌ ಘೋಷಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT