ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಿರಬೇಕು: ಸುಪ್ರೀಂ ಕೋರ್ಟ್‌ ನ್ಯಾ. ನಾಗರತ್ನಾ

ನೋಟು ರದ್ದತಿಗೆ ಅಸಮ್ಮತಿ ಸೂಚಿಸಿದ್ದನ್ನು ನೆನಪಿಸಿಕೊಂಡ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ
Published 31 ಮಾರ್ಚ್ 2024, 14:08 IST
Last Updated 31 ಮಾರ್ಚ್ 2024, 14:08 IST
ಅಕ್ಷರ ಗಾತ್ರ

ಹೈದರಾಬಾದ್‌: ಚುನಾಯಿತ ಶಾಸಕರು ಅಂಗೀಕರಿಸಿದ ಮಸೂದೆಗಳನ್ನು ಅನಿರ್ದಿಷ್ಟಾವಧಿವರೆಗೆ ಹಿಡಿದಿಟ್ಟುಕೊಳ್ಳುವ ರಾಜ್ಯಪಾಲರ ವರ್ತನೆ ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಎಚ್ಚರಿಸಿದರು. ಅವರು, ಪಂಜಾಬ್‌ ರಾಜ್ಯಪಾಲರನ್ನು ಒಳಗೊಂಡ ಪ್ರಕರಣವೊಂದನ್ನು ಉಲ್ಲೇಖಿಸಿ ಈ ಕುರಿತು ಹೇಳಿಕೆ ನೀಡಿದರು.

ಇಲ್ಲಿನ ಎನ್‌ಎಎಲ್‌ಎಸ್‌ಎಆರ್‌ ಕಾನೂನು ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ನ್ಯಾಯಾಲಯಗಳು ಮತ್ತು ಸಂವಿಧಾನ ಅಧಿವೇಶನದ ಐದನೇ ಆವೃತ್ತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಮಹಾರಾಷ್ಟ್ರ ವಿಧಾನಸಭೆಯ ಪ್ರಕರಣವನ್ನೂ ಉಲ್ಲೇಖಿಸಿದ ಅವರು, ಸಾಕಷ್ಟು ಪುರಾವೆಗಳ ಕೊರತೆಯ ನಡುವೆಯೂ ರಾಜ್ಯಪಾಲರು ಸದನದ ಬಲಾಬಲ ಪರೀಕ್ಷೆಗೆ ಸೂಚಿಸಿದ್ದು, ಅತಿಕ್ರಮಣದ ಮತ್ತೊಂದು ನಿದರ್ಶನ ಎಂದರು.

ರಾಜ್ಯಪಾಲರು ತೆಗೆದುಕೊಂಡ ಕ್ರಮಗಳನ್ನು ಅಥವಾ ಅವರಿಂದಾದ ಲೋಪಗಳನ್ನು ಸಾಂವಿಧಾನಿಕ ನ್ಯಾಯಾಲಯಗಳ ಮುಂದೆ ಪರಿಗಣನೆಗೆ ತರುವುದು, ಸಂವಿಧಾನದ ಅಡಿಯಲ್ಲಿ ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಅವರು ಹೇಳಿದರು.

ಸಂವಿಧಾನಕ್ಕೆ ಅನುಗುಣವಾಗಿ ಕೆಲಸ ಮಾಡಿ: ‘ರಾಜ್ಯಪಾಲರದ್ದು ಗಂಭೀರವಾದ ಸಾಂವಿಧಾನಿಕ ಹುದ್ದೆ. ಅವರು ಸಂವಿಧಾನಕ್ಕೆ ಅನುಗುಣವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ, ಈ ರೀತಿಯ ದಾವೆಗಳು ನ್ಯಾಯಾಲಯದ ಮೆಟ್ಟಿಲು ಹತ್ತುವುದು ಕಡಿಮೆಯಾಗುತ್ತವೆ’ ಎಂದು ನ್ಯಾಯಮೂರ್ತಿ ನಾಗರತ್ನಾ ತಿಳಿಸಿದರು.  

‘ರಾಜ್ಯಪಾಲರಿಗೆ ಇಂತಹ ಕೆಲಸ ಮಾಡಿ ಅಥವಾ ಇಂತಹದ್ದನ್ನು ಮಾಡಬೇಡಿ ಎಂದು ಹೇಳುವುದು ಮುಜುಗರದ ಸಂಗತಿ’ ಎಂದ ಅವರು, ‘ಆದರೂ ಅವರಿಗೆ ಸಂವಿಧಾನದ ಪ್ರಕಾರ ಕರ್ತವ್ಯ ನಿರ್ವಹಿಸಿ ಎಂದು ಹೇಳುವ ಸಮಯ ಬಂದಿದೆ’ ಎಂದರು. 

ತಮಿಳುನಾಡಿನ ಡಿಎಂಕೆ ನಾಯಕ ಕೆ. ಪೊನ್ಮುಡಿ ಅವರನ್ನು ಸಂಪುಟ ಸಚಿವರನ್ನಾಗಿ ನೇಮಿಸುವುದಕ್ಕೆ ನಿರಾಕರಿಸಿದ್ದ ತಮಿಳುನಾಡಿನ ರಾಜ್ಯಪಾಲ ಆರ್‌.ಎನ್‌.ರವಿ ಅವರ ನಡವಳಿಕೆ ಕುರಿತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ತ್ರಿಸದಸ್ಯ ಪೀಠ ಗಂಭೀರ ಕಳವಳ ವ್ಯಕ್ತಪಡಿಸಿದ ಕೆಲದಿನಗಳ ನಂತರ ನಾಗರತ್ನಾ ಅವರು ಈ ಹೇಳಿಕೆ ನೀಡಿದ್ದಾರೆ.

ನೋಟು ರದ್ದತಿ ಕುರಿತು ಪ್ರಸ್ತಾಪ: ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ ಪ್ರಕರಣದಲ್ಲಿ ತಾನು ಅಸಮ್ಮತಿ ಸೂಚಿಸಿದ್ದನ್ನೂ ಅವರು ಈ ವೇಳೆ ಪ್ರಸ್ತಾಪಿಸಿದರು. ‘2016ರಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದಾಗ, ₹500 ಮತ್ತು 1,000 ಮುಖಬೆಲೆಯ ನೋಟುಗಳು ಒಟ್ಟಾರೆ ಕರೆನ್ಸಿಯಲ್ಲಿ ಶೇ 86ರಷ್ಟಿದ್ದವು. ಅದರಲ್ಲಿ ಶೇ 98ರಷ್ಟು ವಾಪಸಾದವು. ಕಪ್ಪು ಹಣವನ್ನು ಸಕ್ರಮವಾಗಿ ಪರಿವರ್ತಿಸುವ, ಲೆಕ್ಕಕ್ಕೆ ಸಿಗದ ನಗದನ್ನು ಲೆಕ್ಕಕ್ಕೆ ಸಿಗುವಂತೆ ಮಾಡುವ ಒಂದು ಉತ್ತಮ ಮಾರ್ಗ ಇದು ಎಂದು ಭಾವಿಸಿದ್ದೆವು. ಆದರೆ, ಸಾಮಾನ್ಯ ವ್ಯಕ್ತಿಯ ಸಂಕಟವು ನಿಜಕ್ಕೂ ನನ್ನ ಮನ ಕಲಕಿತು. ಆದ್ದರಿಂದ ನಾನು ಅಸಮ್ಮತಿ ಸೂಚಿಸಬೇಕಾಯಿತು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT