ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ.ಬಂಗಾಳ | ಲೈಂಗಿಕ ಅಲ್ಪಸಂಖ್ಯಾತರಿಗೆ ಶೇ1ರಷ್ಟು ಮೀಸಲಾತಿ: ಸರ್ಕಾರಕ್ಕೆ ಹೈಕೋರ್ಟ್

ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಸೂಚನೆ
Published 16 ಜೂನ್ 2024, 13:06 IST
Last Updated 16 ಜೂನ್ 2024, 13:06 IST
ಅಕ್ಷರ ಗಾತ್ರ

ಕೋಲ್ಕತ್ತ: ರಾಜ್ಯದ ಎಲ್ಲ ಸರ್ಕಾರಿ ನೌಕರಿಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ಶೇಕಡ 1ರಷ್ಟು ಹುದ್ದೆಗಳನ್ನು ಮೀಸಲಿಡುವಂತೆ ಕಲ್ಕತ್ತ ಹೈಕೋರ್ಟ್, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ.

ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗಗಳಲ್ಲಿ ಸಮಾನ ಅವಕಾಶ ಎನ್ನುವ ನೀತಿಯನ್ನು ರಾಜ್ಯ ಸರ್ಕಾರವು ಅಳವಡಿಸಿಕೊಂಡಿದ್ದರೂ, ಅವರಿಗೆ ಇನ್ನೂ ಮೀಸಲಾತಿಯನ್ನು ಕಲ್ಪಿಸಿಲ್ಲ ಎಂದು ನ್ಯಾಯಮೂರ್ತಿ ರಾಜಶೇಖರ್ ಮಂಥಾ ಅವರು ಹೇಳಿದ್ದಾರೆ. 

2014 ಹಾಗೂ 2022ರಲ್ಲಿ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಈ ಸೂಚನೆ ನೀಡಿದ್ದಾರೆ. ಎರಡೂ ಪರೀಕ್ಷೆಗಳಲ್ಲಿ ಉತ್ತೀರ್ಣ ಆಗಿದ್ದರೂ ತಮ್ಮನ್ನು ಕೌನ್ಸೆಲಿಂಗ್ ಅಥವಾ ಸಂದರ್ಶನಕ್ಕೆ ಕರೆದಿಲ್ಲ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದರು.

ಲೈಂಗಿಕ ಅಲ್ಪಸಂಖ್ಯಾತರನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರು ಎಂದು ಗುರುತಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡುವಾಗ, ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿ ನಡೆಸುವಾಗ ಅವರಿಗೆ ಎಲ್ಲ ಬಗೆಯ ಮೀಸಲಾತಿ ನೀಡುವಂತೆ ಸೂಚಿಸಿತ್ತು ಎಂದು ನ್ಯಾಯಮೂರ್ತಿ ಮಂಥಾ ಅವರು ಉಲ್ಲೇಖಿಸಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರು ಯಾವುದೇ ಬಗೆಯ ತಾರತಮ್ಯ ಇಲ್ಲದೆ, ಉದ್ಯೋಗಗಳಲ್ಲಿ ಸಮಾನ ಅವಕಾಶಕ್ಕೆ ಅರ್ಹರು ಎಂದು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆಯು 2022ರ ನವೆಂಬರ್‌ನಲ್ಲಿ ಅಧಿಸೂಚನೆ ಹೊರಡಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯು ಹೈಕೋರ್ಟ್‌ಗೆ ವಿವರಿಸಿದ್ದರು.

ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗಗಳಲ್ಲಿ ಸಮಾನ ಅವಕಾಶ ಇರುವಂತೆ ನೋಡಿಕೊಳ್ಳುವ ನೀತಿಯನ್ನು ಸರ್ಕಾರವೇ ಅಳವಡಿಸಿಕೊಂಡಿದೆ ಎಂಬುದು ಅಧಿಸೂಚನೆಯಿಂದ ಸ್ಪಷ್ಟವಾಗುತ್ತದೆ. ಆದರೆ ಸುಪ್ರೀಂ ಕೋರ್ಟ್‌ ಸೂಚನೆಗೆ ಅನುಗುಣವಾದ ಮೀಸಲಾತಿ ಸೌಲಭ್ಯವನ್ನು ರಾಜ್ಯದಲ್ಲಿ ಲೈಂಗಿಕ ಅಲ್ಪಸಂಖ್ಯಾತರಿಗೆ ನೀಡಿಲ್ಲ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಅರ್ಜಿದಾರರ ಪ್ರಕರಣವನ್ನು ‘ವಿಶೇಷ’ ಎಂದು ಪರಿಗಣಿಸಿ ಅವರಿಗೆ ಸಂದರ್ಶನಕ್ಕೆ ಹಾಗೂ ಕೌನ್ಸೆಲಿಂಗ್‌ಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ನ್ಯಾಯಮೂರ್ತಿಗಳು ರಾಜ್ಯದ ಪ್ರಾಥಮಿಕ ಶಿಕ್ಷಣ ಮಂಡಳಿಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT