ನವದೆಹಲಿ: ಕರ್ನಾಟಕ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ‘ಮತ ಸೆಳೆಯುವ ಉದ್ದೇಶ’ದಿಂದ ಘೋಷಿಸಿದ್ದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ರಾಜ್ಯದಲ್ಲಿ ₹12,863 ಕೋಟಿ ಮೊತ್ತದ 12 ಕಾಮಗಾರಿಗಳಿಗೆ ಜಾಗದ ಲಭ್ಯತೆಯೇ ಇಲ್ಲ.
ರಾಜ್ಯದಲ್ಲಿ 2,335 ಕಿ.ಮೀ. ಉದ್ದದ 91 ಹೆದ್ದಾರಿಗಳ ಕಾಮಗಾರಿ ಪ್ರಗತಿಯಲ್ಲಿವೆ. ಈ ಕಾಮಗಾರಿಗಳ ಒಟ್ಟು ವೆಚ್ಚ ₹38,785 ಕೋಟಿ. ಇದರಲ್ಲಿ ಕೆಲವು ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿದ್ದರೆ, ಇನ್ನೂ ಹಲವು ಕಾಮಗಾರಿಗಳು ಶೇ 10–20ರಷ್ಟು ಪ್ರಗತಿ ಸಾಧಿಸಿವೆ. ಆದರೆ, ₹16,436 ಕೋಟಿ ಅಂದಾಜು ವೆಚ್ಚದ 25 ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ. 12 ಯೋಜನೆಗಳಿಗೆ ಭೂಮಿಯದ್ದೇ ಸಮಸ್ಯೆ. 7 ಯೋಜನೆಗಳ ಬಿಡ್‌ಗಳು ಪರಿಶೀಲನೆ ಹಂತದಲ್ಲಿವೆ. ಉಳಿದ ಆರು ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸ ಲಾಗಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯದ ಮೂಲಗಳು ತಿಳಿಸಿವೆ.
‘ಗತಿ ಶಕ್ತಿ’ ಯೋಜನೆಯಡಿ ಮೈಸೂರು–ಮಡಿಕೇರಿ ನಡುವೆ ನಾಲ್ಕು ಪಥದ ಹೆದ್ದಾರಿ ನಿರ್ಮಿಸಲಾಗುತ್ತದೆ. ಇದಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 2023ರ ಫೆಬ್ರುವರಿಯಲ್ಲಿ ಪ್ರಕಟಿಸಿದ್ದರು. ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯಕ್ಕೆ ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದರು. ಮೈಸೂರು–ಮಡಿಕೇರಿ ನಡುವೆ ನಾಲ್ಕು ಪ್ಯಾಕೇಜ್‌ಗಳಲ್ಲಿ ₹3,573 ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಆದರೆ, ಇಲ್ಲಿ ಯೋಜನೆ ಅನುಷ್ಠಾನಕ್ಕೆ ಜಮೀನು ಲಭ್ಯ ಇಲ್ಲ. ಹೆದ್ದಾರಿಗಳ ವಿಸ್ತರಣೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯದಿರುವುದೇ ವಿಳಂಬಕ್ಕೆ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಸಹಾಯಕತೆ ವ್ಯಕ್ತಪಡಿಸಿದೆ.
ಬೆಳಗಾವಿ–ಹುನಗುಂದ–ರಾಯಚೂರು ನಡುವೆ ಆರು ಪ್ಯಾಕೇಜ್ ಗಳಲ್ಲಿ ಹೆದ್ದಾರಿ ವಿಸ್ತರಣೆ ಮಾಡಲು ಯೋಜಿಸಲಾಗಿದೆ. ಚುನಾವಣೆಯ ಪೂರ್ವದಲ್ಲಿ ಘೋಷಣೆಯಾದ ಯೋಜನೆಗಳಿವು. ಹೆದ್ದಾರಿ ವಿಸ್ತರಣೆಗೆ ಭೂಸ್ವಾಧೀನ ಮಾಡಬೇಕಿದೆ. ಆದರೆ, ಈ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ, ಈ ಯೋಜನೆಗೆ ಚಾಲನೆ ಸಿಕ್ಕಿಲ್ಲ ಎಂದು ಪ್ರಾಧಿಕಾರ ಹೇಳಿಕೊಂಡಿದೆ.
ಹೊನ್ನಾವರ ಬಂದರು–ಕಾಸರಕೋಡ್ ನಡುವಿನ ಹೆದ್ದಾರಿ ವಿಸ್ತರಣೆಗೆ ಮೀನುಗಾರರ ವಿರೋಧ ಇದೆ. ಈ ಯೋಜನೆ ಕೈಗೆತ್ತಿಕೊಳ್ಳದಂತೆ ಒತ್ತಾಯಿಸಿ ಸ್ಥಳೀಯರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೆಟ್ಟಿಲೇರಿದ್ದು, ಮೂರು ವರ್ಷಗಳಿಂದ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಯುತ್ತಿದೆ.
ರಾಜ್ಯದಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಹಾಗೂ ಭೂಸ್ವಾಧೀನ ಕಗ್ಗಂಟಾಗಿರುವ ಕುರಿತು ಗಡ್ಕರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 15 ದಿನಗಳಲ್ಲಿ ಮತ್ತೆ ರಾಜ್ಯ ಸರ್ಕಾರದೊಂದಿಗೆ ಸಭೆ ನಡೆಸಿ ಕಾಮಗಾರಿಗಳ ತೊಡಕುಗಳನ್ನು ನಿವಾರಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಗಳಿಗೆ ಭೂಮಿಯ ಅಲಭ್ಯತೆ
ಬೆಳಗಾವಿ–ಹುನಗುಂದ–ರಾಯಚೂರು ಹೆದ್ದಾರಿ (ರಾಷ್ಟ್ರೀಯ ಹೆದ್ದಾರಿ 748ಎ)
ಯೋಜನೆ; ಉದ್ದ (ಕಿ.ಮೀ); ಮೊತ್ತ (₹ಕೋಟಿಗಳಲ್ಲಿ)
ಪ್ಯಾಕೇಜ್ 1; 43.8; 1,452
ಪ್ಯಾಕೇಜ್ 2; 46; 1,427
ಪ್ಯಾಕೇಜ್ 3; 46;1,363
ಪ್ಯಾಕೇಜ್ 4; 46;1,311
ಪ್ಯಾಕೇಜ್ 5; 46; 1,142
ಪ್ಯಾಕೇಜ್ 6; 44; 1,246
ಬಳ್ಳಾರಿ–ಬೈರಾಪುರ ಹೆದ್ದಾರಿ; 13;604
ಹೊನ್ನಾವರ ಬಂದರು–ಕಾಸರಕೋಡ್; 4.58; 172
ಮೈಸೂರು–ಮಡಿಕೇರಿ ಹೆದ್ದಾರಿ
ಪ್ಯಾಕೇಜ್ 2; 22.7; 909
ಪ್ಯಾಕೇಜ್ 3; 24;883
ಪ್ಯಾಕೇಜ್ 4; 26;1062
ಪ್ಯಾಕೇಜ್ 5; 18.98; 1272
ಆಮೆಗತಿಯಲ್ಲಿ ಹೆದ್ದಾರಿ ಕಾಮಗಾರಿಗಳು
ಹೆದ್ದಾರಿ; ವೆಚ್ಚ (₹ಕೋಟಿಗಳಲ್ಲಿ); ಕಿ.ಮೀ; ಪ್ರಗತಿ (ಶೇ)
ಹುಬ್ಬಳ್ಳಿ–ಧಾರವಾಡ (ಆರುಪಥ); 1135; 30.35; 42.70
ಹಾಸನ–ಮಾರೇನಹಳ್ಳಿ; 701; 45; 77
ಹೊಸಪೇಟೆ–ಬಳ್ಳಾರಿ–ಆಂಧ್ರ ಗಡಿ; 1340; 95;39.30
ಹಾವೇರಿ–ಶಿರಸಿ; 313;74;12.80
ಕಾರ್ಕಳ–ಮಂಗಳೂರು; 1409;45; 41
ನೆಲಮಂಗಲ–ತುಮಕೂರು (ಆರು ಪಥ); 2032;44;41
ಪಟ್ಟದಕಲ್ಲು–ಶಿರೂರು ತಿರುವು; 264;26; 1
ಗೌರಿಬಿದನೂರು–ಚಿಕ್ಕಬಳ್ಳಾಪುರ; 398;51.5;50
ಶರಾವತಿ ಹಿನ್ನೀರಿನಲ್ಲಿ ಸೇತುವೆ ನಿರ್ಮಾಣ, ಹೆದ್ದಾರಿ ವಿಸ್ತರಣೆ; 313;13;5
ಬಾಣಾಪುರ–ಗದ್ದನಕೇರಿ; 445;26;9.5
ಕಡೂರು–ಹೊಸದುರ್ಗ;471;48;0
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.