ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯ- ಹಿಂದೂ ಮಹಾಸಾಗರದ ನಡುವೆ ವಾಸಿಸುವವರೆಲ್ಲರೂ ಹಿಂದೂಗಳು: ಕೇಂದ್ರ ಸಚಿವ

Last Updated 1 ಮೇ 2022, 4:46 IST
ಅಕ್ಷರ ಗಾತ್ರ

ಹೈದರಾಬಾದ್: 'ಹಿಂದೂ' ಎನ್ನುವುದು ಕೇವಲ ಭೌಗೋಳಿಕ ಗುರುತಷ್ಟೆ. ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವಿನ ಭೂಮಿಯಲ್ಲಿ ವಾಸಿಸುವ ಎಲ್ಲಾ ಜನರು ಹಿಂದೂಗಳು ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಶನಿವಾರ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಭಾರತ್ ನೀತಿ ಸಂಸ್ಥೆ (Bharat Niti Organisation) ಆಯೋಜಿಸಿದ್ದ 'ಡಿಜಿಟಲ್ ಹಿಂದೂ ಕಾನ್‌ಕ್ಲೇವ್'ನ 10 ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, 'ನಮ್ಮ ದೇಶ ಜ್ಞಾನದ ನಾಡು ಎಂಬುದನ್ನು ಅನೇಕ ವಿದೇಶಿ ವಿದ್ವಾಂಸರು ಕೂಡ ಒಪ್ಪಿಕೊಂಡಿದ್ದಾರೆ. ಹೀಗಾಗಿ ನಾವೆಲ್ಲರೂ ಭಾರತೀಯರಾಗಿರುವುದಕ್ಕೆ ಹೆಮ್ಮೆ ಪಡಬೇಕು' ಎಂದು ಹೇಳಿದರು.

'ಹಿಂದೂ ಧರ್ಮ ಎನ್ನುವುದು ಒಂದು ಜೀವನ ವಿಧಾನವಾಗಿದೆ ಮತ್ತು ನಾವು ಎಂದಿಗೂ 'ಹಿಂದೂ' ಪದವನ್ನು ಸೀಮಿತ ಗಡಿಗಳಿಗೆ ನಿರ್ಬಂಧಿಸಬಾರದು ಎಂದು ನಾನು ಹೇಳುತ್ತೇನೆ. ಹಿಂದೂ ಎನ್ನುವುದು ಭೌಗೋಳಿಕ ಗುರುತು. ಹಿಮಾಲಯ ಮತ್ತು ಹಿಂದೂ ಮಹಾಸಾಗರದ ನಡುವೆ ವಾಸಿಸುವ ಎಲ್ಲಾ ಜನರು ಹಿಂದೂಗಳು' ಎಂದು ಚೌಬೆ ತಿಳಿಸಿದರು.

ಚೌಬೆ ಅವರಲ್ಲದೆ, ಬಿಜೆಪಿಯ ಹಿರಿಯ ನಾಯಕ ಮುರಳೀಧರ ರಾವ್ ಮತ್ತು ಪಕ್ಷದ ಸಂಸದ ಮನೋಜ್ ತಿವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಉತ್ತರ ಹಾಗೂ ದಕ್ಷಿಣದ ರಾಜ್ಯಗಳ ಜನರ ಉಪಸ್ಥಿತಿಯು ದೇಶದ ಏಕತೆ ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ ಎಂದು ಚೌಬೆ ಹೇಳಿದರು.

'ಭಾರತವು ಜಗತ್ತು ಒಪ್ಪಿಕೊಂಡಿರುವ ಸ್ಪಂದನ ಶೀಲ ಪ್ರಜಾಪ್ರಭುತ್ವಕ್ಕೆ ಉದಾಹರಣೆ ಆಗಿದೆ. ನಾವು ನಮ್ಮ ದೇಶವನ್ನು ನಮ್ಮ ತಾಯಿ ಎಂದು ಪರಿಗಣಿಸುತ್ತೇವೆ ಮತ್ತು ನಾವು ಭಾರತವನ್ನು 'ಭಾರತ ಮಾತಾ' ಎಂದು ಕರೆಯುತ್ತೇವೆ. ಇದು ಉಳಿದವರಿಂದ ನಾವು ಭಿನ್ನ ಎಂಬುದನ್ನು ತೋರಿಸುತ್ತದೆ' ಎಂದು ಹೇಳಿದ್ದಾರೆ.

ನದಿಗಳ ಮರುಸ್ಥಾಪನೆಯಲ್ಲಿ ಎನ್‌ಡಿಎ ಸರ್ಕಾರದ ಪ್ರಯತ್ನಗಳ ಕುರಿತು ಮಾತನಾಡಿದ ಅವರು, 'ಗಂಗಾ ನದಿಯ ಸಂರಕ್ಷಣೆ ಮತ್ತು ಪುನರುಜ್ಜೀವನಕ್ಕಾಗಿ ಸರ್ಕಾರವು 'ನಮಾಮಿ ಗಂಗೆ' ಯೋಜನೆಯನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT