ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆಗೆ 97 ‘ತೇಜಸ್‌ ಮಾರ್ಕ್–1ಎ’ ವಿಮಾನ ಖರೀದಿ

Published 3 ಅಕ್ಟೋಬರ್ 2023, 15:53 IST
Last Updated 3 ಅಕ್ಟೋಬರ್ 2023, 15:53 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಯು ₹1.15 ಲಕ್ಷ ಕೋಟಿ ವೆಚ್ಚದಲ್ಲಿ 97 ತೇಜಸ್‌ ಮಾರ್ಕ್–1ಎ ವಿಮಾನಗಳನ್ನು ಖರೀದಿಸಲಿದೆ. ಈ ಖರೀದಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದೆ ಎಂದು ಏರ್‌ ಚೀಫ್‌ ಮಾರ್ಷಲ್‌ ವಿ.ಆರ್.ಚೌಧರಿ ತಿಳಿಸಿದ್ದಾರೆ.

‘ಇದರ ಜೊತೆಗೆ 84 ಸುಖೋಯ್‌ 30 ಎಂಕೆಐ ಜೆಟ್‌ ವಿಮಾನಗಳನ್ನು ಅಂದಾಜು ₹ 60 ಸಾವಿರ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

2021ರ ಫೆಬ್ರುವರಿಯಲ್ಲಿ ₹ 48,000 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರ ಅಧೀನದ ಹಿಂದೂಸ್ತಾನ್‌ ಏರೊನಾಟಿಕ್ಸ್‌ ಲಿಮಿಟೆಡ್‌ನಿಂದ 83 ತೇಜಸ್‌ ಎಂಕೆ–1ಎ ವಿಮಾನಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ಒಪ್ಪಂದ ಮಾಡಿಕೊಂಡಿತ್ತು.

ಈಗ ಹೆಚ್ಚುವರಿಯಾಗಿ 97 ಮಾರ್ಕ್ 1ಎ ತೇಜಸ್ ವಿಮಾನಗಳನ್ನು ಖರೀದಿಸಲಿದ್ದು, ಇದರೊಂದಿಗೆ ವಾಯುಪಡೆಯು ಹೊಂದಲಿರುವ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಿಮಾನಗಳ ಸಂಖ್ಯೆ 180ಕ್ಕೆ ಏರಲಿದೆ.

‘156 ಹಗುರ ಯುದ್ಧ ಹೆಲಿಕಾಪ್ಟರ್‌ಗಳ (ಎಲ್‌ಸಿಎಚ್‌) ಖರೀದಿಗೆ ಎಚ್‌ಎಎಲ್‌ ಜೊತೆಗೆ ಮುಂದಿನ ವರ್ಷ ರಕ್ಷಣಾ ಸಚಿವಾಲಯ ಒಪ್ಪಂದ ಮಾಡಿಕೊಳ್ಳಲಿದೆ. ಪ್ರಸ್ತುತ ವಾಯುಪಡೆಯು 10 ಎಲ್‌ಸಿಎಚ್‌ಗಳನ್ನು ಹೊಂದಿದೆ’ ಎಂದು ಏರ್‌ ಚೀಫ್‌ ಮಾರ್ಷಲ್‌ ತಿಳಿಸಿದರು.

ಈಗ ಖರೀದಿಸಲು ಉದ್ದೇಶಿಸಿರುವ ಎಲ್‌ಸಿಎ ಮಾರ್ಕ್‌–1ಎ ಯುದ್ಧ ವಿಮಾನಗಳು ಯಾವ ವೇಳೆಗೆ ವಾಯುಪಡೆಗೆ ಸೇರ್ಪಡೆಗೊಳ್ಳಲಿವೆ ಎಂಬ ಪ್ರಶ್ನೆಗೆ, ಎಚ್ಎಎಲ್‌ ಪ್ರಸ್ತುತ ವಾರ್ಷಿಕ 15 ವಿಮಾನಗಳನ್ನಷ್ಟೇ ಅಭಿವೃದ್ಧಿಪಡಿಸಲಿದೆ. ಖಾಸಗಿ ಸಂಸ್ಥೆಗಳ ಜೊತೆಗಿನ ಸಹಭಾಗಿತ್ವವನ್ನು ಹೊಂದಿದ ಬಳಿಕ ಎಚ್‌ಎಎಲ್‌ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ಪ್ರತಿಕ್ರಿಯಿಸಿದರು.

‘ಬಹುನಿರೀಕ್ಷಿತ ತೇಜಸ್‌ ಮಾರ್ಕ್–2 ಮೊದಲ ಯುದ್ಧ ವಿಮಾನವು 2025ರ ವೇಳೆಗೆ ಬಳಕೆಗೆ ಸಿದ್ಧವಾಗುವ ಸಂಭವವಿದೆ. ಇದು, ಒಂದೇ ಎಂಜಿನ್ ಇರುವ ಬಹುಪಯೋಗಿ ವಿಮಾನವಾಗಿದೆ. ಹೆಚ್ಚು ಸವಾಲಿನ ವಾತಾವರಣದಲ್ಲಿಯೂ ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT