ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

75ನೇ ಗಣರಾಜ್ಯೋತ್ಸವ: ಈ ಬಾರಿ ನಾರಿಶಕ್ತಿ ಪ್ರದರ್ಶನದೊಂದಿಗೆ ಇವೆ ಹಲವು ಮೊದಲುಗಳು

Published 25 ಜನವರಿ 2024, 13:42 IST
Last Updated 25 ಜನವರಿ 2024, 13:46 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಲಿರುವ ದೇಶದ 75ನೇ ಗಣರಾಜ್ಯೋತ್ಸವದಲ್ಲಿ ಹೆಚ್ಚುತ್ತಿರುವ ಸೇನೆಯ ಶಕ್ತಿ ಮತ್ತು ಶ್ರೀಮಂತ ಸಂಸ್ಕೃತಿಯ ಅನಾವರಣಕ್ಕೆ ಕ್ಷಣ ಗಣನೆ ಆರಂಭಗೊಂಡಿದೆ.

ರಾಷ್ಟ್ರ ರಾಜಧಾನಿಯಲ್ಲಿರುವ ಕರ್ತವ್ಯ ಪಥದಲ್ಲಿ ನಡೆಯಲಿರುವ 90 ನಿಮಿಷಗಳ ಪೆರೇಡ್‌ನಲ್ಲಿ ದೇಶದ ನಾರಿಶಕ್ತಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಅನಾವರಣಕ್ಕೆ ಮುಖ್ಯ ಅತಿಥಿ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯಲ್ ಮ್ಯಾಕ್ರಾನ್‌ ಸಾಕ್ಷಿಯಾಗಲಿದ್ದಾರೆ.

ಸಶಸ್ತ್ರ ಪಡೆಗಳು ದೇಶೀಯವಾಗಿ ಅಭಿವೃದ್ಧಿಗೊಂಡ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಿವೆ. ಇದರಲ್ಲಿ ಕ್ಷಿಪಣಿ, ಡ್ರೋನ್ ಆಧಾರಿತ ಜಾಮರ್‌, ವಿಚಕ್ಷಣಾ ವ್ಯವಸ್ಥೆ ಸೇರಿದಂತೆ ಹಲವು ಹೊಸ ಅತ್ಯಾಧುನಿಕ ಸಾಧನಗಳು ಪರಿಚಯಗೊಳ್ಳಲಿವೆ. 

ಗಣರಾಜ್ಯೋತ್ಸವದ 75ನೇ ವರ್ಷಾಚರಣೆಯ ವಿದ್ಯುಕ್ತ ಕಾರ್ಯಕ್ರಮದಲ್ಲಿ ದೇಶದ ಮೂರೂ ಸೇನೆಗಳ ಮಹಿಳಾ ತುಕಡಿಗಳು ಮೊಟ್ಟ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿವೆ. ಇದಕ್ಕಾಗಿ ಗುರುವಾರ ಸಂಜೆಯವರೆಗೂ ತಾಲೀಮುಗಳು ನಡೆದವು. ದೆಹಲಿ ಪೊಲೀಸ್‌ನ ಮಹಿಳಾ ತುಕಡಿಗಳು ನಡೆಸಿದ ಅಭ್ಯಾಸ ಪೆರೇಡ್‌ಗೆ ಎಲ್ಲಾ ಪೊಲೀಸ್ ಅಧಿಕಾರಿಗಳೂ ಹೂಮಳೆಗರೆದು ಸಂಭ್ರಮಿಸಿದರು.

ಲೆಫ್ಟೆನೆಂಟ್‌ ದೀಪ್ತಿ ರಾಣಾ ಹಾಗೂ ಪ್ರಿಯಾಂಕಾ ಸೇವ್ಡಾ ಸೇರಿದಂತೆ ಸಶಸ್ತ್ರ ಸೇನಾಪಡೆಗೆ ಕಳೆದ ವರ್ಷ ದಾಖಲಾದ 10 ಮಹಿಳಾ ಅಧಿಕಾರಿಗಳು ಶಸ್ತ್ರಾಸ್ತ್ರ ಪತ್ತೆ ಮಾಡುವ ರ‍್ಯಾಡಾರ್ ‘ಸ್ವಾತಿ’ ಹಾಗೂ ರಾಕೆಟ್‌ ವ್ಯವಸ್ಥೆ ‘ಪ್ರಿಯಾಂಕಾ’ ಅನ್ನು ಪ್ರತಿನಿಧಿಸಲಿದ್ದಾರೆ.

ಪೆರೇಡ್‌ನಲ್ಲಿ 100 ಮಹಿಳಾ ಕಲಾವಿದರು ಒಳಗೊಂಡ ಭಾರತೀಯ ಸಂಗೀತ ಸಾಧನಗಳನ್ನು ನುಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ಮಿಲಿಟರಿ ಬ್ಯಾಂಡ್‌ ಬದಲು ಶಂಖ, ನಾದಸ್ವರ, ನಾಗದ ಸಂಗೀತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮೊಳಗಲಿವೆ.

15 ಮಹಿಳಾ ಪೈಲೆಟ್‌ರನ್ನು ಒಳಗೊಂಡ ಭಾರತೀಯ ವಾಯುಪಡೆಯ ವಿಮಾನಗಳು ಪೆರೇಡ್ ಸಂದರ್ಭದಲ್ಲಿ ಫ್ಲೈ ಪಾಸ್ಟ್‌ ನಡೆಸಲಿವೆ. ಮಹಿಳಾ ಅಧಿಕಾರಿಗಳನ್ನೇ ಒಳಗೊಂಡ ಕೇಂದ್ರ ಸಶಸ್ತ್ರ ಮೀಸಲುಪಡೆಯ ತುಕಡಿ ಈ ಬಾರಿ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತಿದೆ.

ಬೆಳಿಗ್ಗೆ 10.30ಕ್ಕೆ ಪರೇಡ್ ಆರಂಭ

ಗಣರಾಜ್ಯೋತ್ಸವ ಪೆರೇಡ್‌ ಬೆಳಿಗ್ಗೆ 10.30ಕ್ಕೆ ಆರಂಭವಾಗಿ 90 ನಿಮಿಷಗಳ ಕಾಲ ನಡೆಯಲಿದೆ. ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿ ದೇಶಕ್ಕಾಗಿ ಪ್ರಾಣ ಸಮರ್ಪಿಸಿದ ಯೋಧರಿಗೆ ಗೌರವ ನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮ ಆರಂಭವಾಗಲಿದೆ.

40 ವರ್ಷಗಳ ನಂತರ ಸಾಂಪ್ರದಾಯಿಕ ಸಾರೋಟು ಬಳಕೆ

ಇದಾದ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯ ಅತಿಥಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ಸಾಂಪ್ರದಾಯಿಕ ಸಾರೋಟಿನಲ್ಲಿ ಕರ್ತವ್ಯ ಪಥಕ್ಕೆ ಆಗಮಿಸಲಿದ್ದಾರೆ. 40 ವರ್ಷಗಳ ಹಿಂದೆ ಇದು ಸ್ಥಗಿತಗೊಂಡಿತ್ತು. 2024ರಲ್ಲಿ ಇದನ್ನು ಮರಳಿ ಪರಿಚಯಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ರಾಷ್ಟ್ರಧ್ವಜಾರೋಹಣ, ರಾಷ್ಟ್ರಗೀತೆ, ದೇಶೀಯವಾಗಿ ನಿರ್ಮಾಣಗೊಂಡ 105 ಮಿ.ಮೀ. ಬಂದೂಕಿನಿಂದ 21 ಕುಶಾಲತೋಪು, ಕರ್ತವ್ಯಪಥದ ಮೇಲೆ 105 ಹೆಲಿಕಾಪ್ಟರ್ ತುಕಡಿಯ ನಾಲ್ಕು ಎಂಐ–17IV ಹೆಲಿಕಾಪ್ಟರ್‌ಗಳಿಂದ ಹೂಮಳೆ, 100 ಮಹಿಳಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ ‘ಆವಾಹನ್‌’ ನಡೆಯಲಿದೆ.

ರಾಷ್ಟ್ರಪತಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಪೆರೇಡ್‌ ನೇತೃತ್ವವನ್ನು ಲೆಫ್ಟಿನೆಂಟ್ ಜನರಲ್ ಭವನೀಶ್ ಕುಮಾರ್‌ ವಹಿಸಲಿದ್ದಾರೆ.

ಫ್ರೆಂಚ್‌ ತುಕಡಿ, ವಿಮಾನಗಳು ಭಾಗಿ

ಫ್ರೆಂಚ್‌ ಸಶಸ್ತ್ರ ಮೀಸಲುಪಡೆಯ ಬ್ಯಾಂಡ್ ಹಾಗೂ ಮಾರ್ಚ್‌ಗೆ ಕರ್ತವ್ಯ ಪಥ ಸಾಕ್ಷಿಯಾಗಲಿದೆ. 30 ಸದಸ್ಯಬಲದ ಬ್ಯಾಂಡ್ ತಂಡ ಹಾಗೂ 90 ಸದಸ್ಯಬಲದ ಮಾರ್ಚಿಂಗ್ ತಂಡವು ಪಾಲ್ಗೊಳ್ಳಲಿದೆ. ಈ ತಂಡವನ್ನು ಕ್ಯಾಪ್ಟನ್ ಖೌರ್ಡಾ ಮುನ್ನಡೆಸಲಿದ್ದಾರೆ. ಇದರಲ್ಲಿ ಆರು ಭಾರತೀಯರೂ ಇದ್ದಾರೆ.

ಮಲ್ಟಿ ರೋಲರ್‌ ಟ್ಯಾಂಕ್‌ ಸಾಗಿಸುವ ವಿಮಾಣ ಹಾಗೂ 2 ರಾಫೆಲ್‌ ಯುದ್ಧ ವಿಮಾನಗಳು ಈ ಬಾರಿ ಕರ್ತವ್ಯ ಪಥದ ಮೇಲೆ ಹಾರಾಟ ನಡೆಸಲಿವೆ.

ಪ್ರದರ್ಶನಗೊಳ್ಳಲಿವೆ 16 ಸ್ತಬ್ಧಚಿತ್ರಗಳು

ದೇಶದ ಸಾಂಸ್ಕೃತಿಕ ವೈವಿದ್ಯತೆ ಬಿಂಬಿಸುವ 16 ಸ್ತಬ್ಧಚಿತ್ರಗಳು 75ನೇ ಗಣರಾಜ್ಯೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಚತ್ತೀಸಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಕ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರಪ್ರದೇಶ ಹಾಗೂ ತೆಲಂಗಾಣದ ಇದರಲ್ಲಿ ಅವಕಾಶ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT