ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಎದುರಾಗುವ ನೀರಿನ ಅಪಾಯ ತಡೆಯಲು ಬ್ರಹ್ಮಪುತ್ರ ನದಿಗೆ ಭಾರತದಿಂದ ಡ್ಯಾಂ

Last Updated 2 ಡಿಸೆಂಬರ್ 2020, 2:00 IST
ಅಕ್ಷರ ಗಾತ್ರ

ನವದೆಹಲಿ: ಬ್ರಹ್ಮಪುತ್ರ ನದಿಯ ಮೇಲ್ದಂಡೆಯಲ್ಲಿ ಚೀನಾ ಅಣೆಕಟ್ಟುಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ಭವಿಷ್ಯದ ಎದುರಾಗಬಹುದಾದ ಅಪಾಯಗಳನ್ನು ತಡೆಯಲು ಅರುಣಾಚಲ ಪ್ರದೇಶದಲ್ಲಿ ಇದೇ ನದಿಗೆ 10 ಗಿಗಾವ್ಯಾಟ್‌ (GW) ಜಲವಿದ್ಯುತ್ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಚೀನಾದಲ್ಲಿ 'ಯರ್ಲುಂಗ್ ತ್ಸಾಂಗ್ಬೊ' ಎಂದೂ ಕರೆಯಲಾಗುವ ಬ್ರಹ್ಮಪುತ್ರ ಟಿಬೆಟ್‌ನಿಂದ ಅರುಣಾಚಲ ಪ್ರದೇಶಕ್ಕೆ ಮತ್ತು ಅಸ್ಸಾಂ ಮೂಲಕ ಬಾಂಗ್ಲಾದೇಶಕ್ಕೆ ಹರಿಯುತ್ತದೆ. ಚೀನಾದ ಅಣೆಕಟ್ಟು ಯೋಜನೆಗಳಿಂದ ದಿಢೀರ್‌ ಪ್ರವಾಹ ಅಥವಾ ನೀರಿನ ಕೃತಕ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳ ಬಗ್ಗೆ ಭಾರತೀಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

'ಚೀನಾದ ಅಣೆಕಟ್ಟು ಯೋಜನೆಗಳ ದುಷ್ಪರಿಣಾಮವನ್ನು ತಗ್ಗಿಸಲು ಅರುಣಾಚಲ ಪ್ರದೇಶದಲ್ಲಿ ದೊಡ್ಡ ಅಣೆಕಟ್ಟು ಹೊಂದುವುದು ಈ ಕ್ಷಣದ ಅಗತ್ಯವಾಗಿದೆ. ನಮ್ಮ ಪ್ರಸ್ತಾಪವು ಸರ್ಕಾರದ ಉನ್ನತ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ. ಚೀನಾದ ಅಣೆಕಟ್ಟುಗಳ ಹರಿವನ್ನು ಸರಿದೂಗಿಸಲು ಭಾರತವು ದೊಡ್ಡ ಪ್ರಮಾಣದ ನೀರಿನ ಸಂಗ್ರಹ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ' ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿ ಟಿ.ಎಸ್. ಮೆಹ್ರಾ ಮಾಹಿತಿ ನೀಡಿದ್ದಾರೆ.

ಭಾರತಕ್ಕೆ ಹತ್ತಿರದಲ್ಲಿ ಬ್ರಹ್ಮಪುತ್ರ ನದಿಗೆ ಕೈಗೊಳ್ಳಲಾಗುವ ಅಣೆಕಟ್ಟು ನಿರ್ಮಾಣ ಚಟುವಟಿಕೆಗಳು ಮತ್ತೊಂದು ಬಗೆಯ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಕೆಲ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

'ಭಾರತವು ಹಿಮಾಲಯದಲ್ಲಿ ಚೀನಾದ ಭೂ ಆಕ್ರಮಣವನ್ನು ಎದುರಿಸುತ್ತಿದೆ, ನದಿ ಮೇಲ್ದಂಡೆಯಲ್ಲಿಯೂ ಅಂಥದ್ದೇ ನಡೆ ಚೀನಾ ಅನುಸರಿಸಿದೆ. ನದಿಗೆ ಅಣೆಕಟ್ಟುಗಳನ್ನು ಕಟ್ಟುವ ಕುರಿತ ವರದಿಗಳು, ಮುಂದೊಂದು ದಿನ ಜಲ ಯುದ್ಧಗಳು ನಡೆಯಲಿವೆ ಎಂಬುದನ್ನು ಎಚ್ಚರಿಸುತ್ತಿವೆ' ಎಂದು ಭಾರತ-ಚೀನಾ ಸಂಬಂಧಗಳ ತಜ್ಞ ಬ್ರಹ್ಮ ಚೆಲ್ಲಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಲಡಾಖ್‌ನಲ್ಲಿ ಸಂಭವಿಸಿದ ಭಾರತ-ಚೀನಾ ಯೋಧರ ಘರ್ಷಣೆ ನಂತರ ಎರಡೂ ದೇಶಗಳ ಸಂಬಂಧ ಹದಗೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT