ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಬ್ಲ್ಯುಟಿಒ ದುರ್ಬಲಕ್ಕೆ ಅಮೆರಿಕ ಯತ್ನ

ಬ್ಯೂನಸ್‌ ಐರಿಸ್‌ ಜಿ–20 ಶೃಂಗಸಭೆಯಲ್ಲಿ ‘ಬ್ರಿಕ್ಸ್‌’ ರಾಷ್ಟ್ರಗಳ ನಾಯಕರ ಅಸಮಾಧಾನ
Last Updated 1 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ವಾಣಿಜ್ಯ ಸಂಘಟನೆಯನ್ನು (ಡಬ್ಲ್ಯುಟಿಒ) ದುರ್ಬಲಗೊಳಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಜಿ–20 ಶೃಂಗಸಭೆಯಲ್ಲಿ ಬ್ರಿಕ್ಸ್‌ ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.

ಡಬ್ಲ್ಯುಟಿಒ ಸಮರ್ಪಕವಾಗಿ ಕಾರ್ಯನಿರ್ವಹಿಸಲು ವಿವಾದ ಇತ್ಯರ್ಥಗೊಳಿಸುವ ಕಾರ್ಯಯೋಜನೆ ಅಗತ್ಯ. ಆದರೆ, ಇಡೀ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಅಮೆರಿಕ ಯತ್ನಿಸುತ್ತಿದೆ ಎಂದು ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (ಬ್ರಿಕ್ಸ್‌) ದೂರಿವೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜೆಂಟಿನಾದ ಬ್ಯೂನಸ್‌ ಐರಿಸ್‌ನಲ್ಲಿ ನಡೆಯುತ್ತಿರುವ ಜಿ–20 ಶೃಂಗಸಭೆಗೂ ಮುನ್ನ ಮಾತುಕತೆ ನಡೆಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಬ್ರೆಜಿಲ್‌ ಅಧ್ಯಕ್ಷ ಮೈಕಲ್‌ ತೇಮರ್‌, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಾಫೊಸಾ, ‘ಡಬ್ಲ್ಯುಟಿಒದಂತಹ ನಿಯಮಾಧಾರಿತ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಪಾರದರ್ಶಕ, ನಿಷ್ಪಕ್ಷಪಾತ ಮತ್ತು ಮುಕ್ತ ಅಂತರರಾಷ್ಟ್ರೀಯ ವ್ಯಾಪಾರವನ್ನು ನಾವು ಸಮರ್ಥಿಸುತ್ತೇವೆ’ ಎಂದು ಹೇಳಿದರು.

ವಿವಾದ ಪರಿಹಾರ ವ್ಯವಸ್ಥೆಯನ್ನು ಡಬ್ಲ್ಯುಟಿಒ ಅಸಮರ್ಪಕವಾಗಿ ನಿರ್ವಹಿಸುತ್ತಿದೆ. ಇದು ಮುಂದುವರಿದರೆ, ಡಬ್ಲ್ಯುಟಿಒದಿಂದ ಹೊರಬರಬೇಕಾಗು‌ತ್ತದೆ ಎಂದು ಅಮೆರಿಕ ಎಚ್ಚರಿಸಿದೆ. ಅಲ್ಲದೆ, ಡಬ್ಲ್ಯುಟಿಒ ಮೇಲ್ಮನವಿ ಮಂಡಳಿಗೆ ನೇಮಕಾತಿ ನಡೆಸುವುದಕ್ಕೂ ಟ್ರಂಪ್‌ ಆಡಳಿತ ತಡೆ ಒಡ್ಡಿದೆ.

‘ಡಬ್ಲ್ಯುಟಿಒದ ಮೇಲ್ಮನವಿ ಮಂಡಳಿಗೆ ಕೂಡಲೇ ನೇಮಕಾತಿ ಪ್ರಕ್ರಿಯೆ ನಡೆಯಬೇಕು’ ಎಂದೂ ಬ್ರಿಕ್ಸ್‌ ರಾಷ್ಟ್ರಗಳು ಒತ್ತಾಯಿಸಿವೆ.

ಆರ್ಥಿಕ ಅಪರಾಧ: ಕ್ರಮಕ್ಕೆ ಭಾರತ ಆಗ್ರಹ
ಬ್ಯೂನಸ್‌ ಐರಿಸ್‌ (ಪಿಟಿಐ): ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವ ಕುರಿತು ಭಾರತ ಒಂಬತ್ತು ಅಂಶಗಳ ಕಾರ್ಯಸೂಚಿಯನ್ನು ‘ಜಿ-20’ ಶೃಂಗಸಭೆಯಲ್ಲಿ ಮಂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಸೂಚಿಯನ್ನು ಮಂಡಿಸಿದರು. ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದಂತೆ ಬಲಿಷ್ಠವಾದ ಮತ್ತು ಕ್ರಿಯಾಶೀಲವಾದ ಪರಸ್ಪರ ಸಹಕಾರ ನೀಡುವುದು ಅಗತ್ಯವಿದೆ ಎಂದು ಕಾರ್ಯಸೂಚಿ ತಿಳಿಸಿದೆ.

ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಅಪರಾಧಿಗಳಿಗೆ ಪ್ರವೇಶ ನೀಡಬಾರದು ಮತ್ತು ಸುರಕ್ಷಿತ ನೆಲೆಯನ್ನು ಒದಗಿಸದಂತೆ ‘ಜಿ20’ ರಾಷ್ಟ್ರಗಳು ಕಾರ್ಯಯೋಜನೆಯನ್ನು ರೂಪಿಸುವುದು ಅಗತ್ಯವಿದೆ ಎಂದುಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಕಾನೂನು ಪ್ರಕ್ರಿಯೆಯಲ್ಲಿ ಸಹಕಾರ ನೀಡುವುದು ಮೊದಲ ಆದ್ಯತೆಯಾಗಬೇಕು. ಅಪರಾಧಿಗಳನ್ನು ಆಯಾ ದೇಶಕ್ಕೆ ಕಳುಹಿಸುವ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಕಾರ್ಯಸೂಚಿ ತಿಳಿಸಿದೆ.

ಭ್ರಷ್ಟಾಚಾರ ವಿರುದ್ಧ ಹಾಗೂ ಅಂತರಾಷ್ಟ್ರೀಯ ಸಂಘಟಿತ ಅಪರಾಧ ಕುರಿತು ವಿಶ್ವಸಂಸ್ಥೆ ನಿರ್ಣಯಗಳನ್ನು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಉಲ್ಲೇಖಿಸಲಾಗಿದೆ.

ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್‌) ಮೂಲಕ ಹಣಕಾಸಿಗೆ ಸಂಬಂಧಿಸಿದ ಬೇಹುಗಾರಿಕೆ ಸಂಸ್ಥೆಗಳು ಹಾಗೂ ಪ್ರಾಧಿಕಾರಗಳ ನಡುವೆ ಸಕಾಲಕ್ಕೆ ಮತ್ತು ಸಮಗ್ರವಾಗಿ ಮಾಹಿತಿ ವಿನಿಯಮ ಮಾಡಿಕೊಳ್ಳಬೇಕು. ಜತೆಗೆ, ಯಶಸ್ವಿಯಾಗಿ ಅಪರಾಧಿಗಳನ್ನು ಹಸ್ತಾಂತರಿಸಿದ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಅತ್ಯುತ್ತಮ ಪದ್ಧತಿಗಳನ್ನು ವಿನಿಮಯ ಮಾಡಿಕೊಳ್ಳಲು ವೇದಿಕೆಯೊಂದನ್ನು ರಚಿಸುವ ಅಗತ್ಯವಿದೆ ಎಂದು ಕಾರ್ಯಸೂಚಿಯಲ್ಲಿ ಪ್ರತಿಪಾದಿಸಲಾಗಿದೆ.

ಆರ್ಥಿಕ ಅಪರಾಧಿಗಳ ಆಸ್ತಿಯನ್ನು ಪತ್ತೆ ಮಾಡುವುದನ್ನು ಸಹ ಜಿ–20 ವೇದಿಕೆ ಪರಿಗಣಿಸಬೇಕು ಎಂದು ಕೋರಲಾಗಿದೆ.

‘ಭಾರತ– ಚೀನಾ ಸಂಬಂಧ ಸುಧಾರಣೆ’
‘ವುಹಾನ್‌ ಶೃಂಗಸಭೆಯ ನಂತರ ಭಾರತ–ಚೀನಾ ಸಂಬಂಧದಲ್ಲಿ ಗಮನಾರ್ಹ ಸುಧಾರಣೆಯಾಗಿದೆ’ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಹೇಳಿದರು.ಇಲ್ಲಿ ನಡೆದ ಜಿ–20 ಶೃಂಗಶಭೆಯಲ್ಲಿ ಮಾತುಕತೆ ನಡೆಸಿದ ಉಭಯ ನಾಯಕರು, ‘2019ರಲ್ಲಿಯೂ ಕೂಡ ಭಾರತ–ಚೀನಾ ಉತ್ತಮ ಸಂಬಂಧ ಕಾಯ್ದುಕೊಳ್ಳಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT