ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಮುನ್ನುಡಿಯ ಚಿತ್ರ ಹಂಚಿಕೊಂಡ ಇರ್ಫಾನ್‌ ಪಠಾಣ್‌: ಮಿಶ್ರಾಗೆ ತಿರುಗೇಟು?

Last Updated 23 ಏಪ್ರಿಲ್ 2022, 13:40 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಅಮಿತ್ ಮಿಶ್ರಾ ನಡುವಿನ ಟ್ವಿಟರ್ ಜಟಾಪಟಿ ಮತ್ತೊಂದು ಹಂತಕ್ಕೆ ತಲುಪಿದೆ.

ಭಾರತೀಯ ಸಂವಿಧಾನದ ಮುನ್ನುಡಿಯ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಇರ್ಫಾನ್‌ ಪಠಾಣ್‌, ‘ನಾನು ಯಾವಾಗಲೂ ಇದನ್ನು ಅನುಸರಿಸುತ್ತೇನೆ. ನಮ್ಮ ಸುಂದರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಇದನ್ನು ಅನುಸರಿಸಲು ನಾನು ಕೋರುತ್ತೇನೆ. ದಯವಿಟ್ಟು ಓದಿ ಮತ್ತು ಮತ್ತೆ ಮತ್ತೆ ಓದಿ’ ಎಂದು ಅವರು ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ.

ಯಾಕೇ ಈ ವಾದ–ವಿವಾದ?

‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯವನ್ನು ಹೊಂದಿದೆ. ಆದರೆ...‘ ಎಂದು ಇರ್ಫಾನ್ ಪಠಾಣ್ ಈ ಹಿಂದೆ ಅಪೂರ್ಣ ಸಾಲಿನ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದರು.

ಪಠಾಣ್‌ ಅವರ ಸಾಲನ್ನು ತಮ್ಮ ಅಭಿಪ್ರಾಯದೊಂದಿಗೆ ಪೂರ್ಣಗೊಳಿಸಿದ್ದ ಮಾಜಿ ಕ್ರಿಕೆಟರ್‌ ಅಮಿತ್‌ ಮಿಶ್ರಾ ಈ ಮೂಲಕ ಪಠಾಣ್‌ಗೆ ತಿರುಗೇಟು ನೀಡಿದ್ದರು.

‘ನನ್ನ ದೇಶ, ನನ್ನ ಸುಂದರ ದೇಶ, ಭೂಮಿಯ ಮೇಲಿನ ಶ್ರೇಷ್ಠ ದೇಶವಾಗುವ ಸಾಮರ್ಥ್ಯ ಹೊಂದಿದೆ. ನಾವು ಅನುಸರಿಸಬೇಕಾದ ಮೊದಲ ಪುಸ್ತಕ ನಮ್ಮ ಸಂವಿಧಾನ ಎಂಬುದನ್ನು ಕೆಲವರು ಅರಿತುಕೊಂಡರೆ ಮಾತ್ರ’ ಎಂದು ಅವರು ಬರೆದುಕೊಂಡಿದ್ದರು. ಮಿಶ್ರಾ ಅವರ ಈ ಪೋಸ್ಟ್‌ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿತ್ತು.

ಇಬ್ಬರ ಟ್ವೀಟ್‌ಗೆ ನೆಟ್ಟಿಗರು ಹಲವು ಆಯಾಮಗಳನ್ನು ನೀಡಿದ್ದರು. ದೆಹಲಿಯ ಜಹಾಂಗೀರ್‌ಪುರಿಯಲ್ಲಿನ ಹಿಂಸಾಚಾರ ಮತ್ತು ದೇಶದ ವಿವಿಧೆಡೆಗಳಲ್ಲಿನ ಕೋಮು ಘರ್ಷಣೆಗಳ ಹಿನ್ನೆಲೆಯಲ್ಲಿ ಇಬ್ಬರೂ ಈ ರೀತಿಯ ಪೋಸ್ಟ್‌ಗಳನ್ನು ಹಾಕುತ್ತಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಪಠಾಣ್ ಅವರ ಸಂದೇಶವನ್ನು ಹಲವರು ಟೀಕಿಸಿದ್ದರು ಕೂಡ. ಇನ್ನು ಕೆಲವರು ಪಠಾಣ್‌ ಅವರ ಅಪೂರ್ಣ ಸಾಲನ್ನು ಮನಬಂದಂತೆ ಪೂರ್ಣಗೊಳಿಸುವ ಪ್ರಯತ್ನ ಮಾಡಿದ್ದರು. ಕ್ರಿಕೆಟ್‌ನಲ್ಲಿ ಗಳಿಸಿಕೊಂಡ ಅಭಿಮಾನವನ್ನು ರಾಜಕೀಯ ಹೇಳಿಕೆ ಮೂಲಕ ಹಾಳು ಮಾಡಿಕೊಳ್ಳಬೇಡಿ ಎಂದು ಕೆಲವರು ಸಲಹೆ ನೀಡಿದ್ದರು.

ಈ ಮಧ್ಯೆ ಪಠಾಣ್‌ ಇಂದು ಸಂವಿಧಾನದ ಮುನ್ನುಡಿಯ ಚಿತ್ರವನ್ನು ಶೇರ್‌ ಮಾಡಿದ್ದಾರೆ. ಇದು ಮತ್ತೊಂದು ಸುತ್ತಿನ ಚರ್ಚೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT