ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರನ್ನು ರಕ್ಷಿಸುವ ಸರ್ಕಾರದ ಯಾವುದಾದರೂ ಇಲಾಖೆ ಇದೆಯೇ?’ ಎಂದು ಎಎಪಿಯ ಮಾಧ್ಯಮ ವಕ್ತಾರ ನವಾಬ್ ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 2019– 21ರ ಅವಧಿಯಲ್ಲಿ ಸುಮಾರು 9 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ವರದಿಯನ್ನು ಆಧರಿಸಿ ಅವರು ಈ ಪ್ರಶ್ನೆ ಕೇಳಿದ್ದಾರೆ.
‘ಇದು ರಾಜಕೀಯ ವಿಚಾರವಲ್ಲ. ಇದು ಮಹಿಳೆಯರ ಸುರಕ್ಷತೆ ಮತ್ತು ಗೌರವದ ವಿಷಯ. ಕಾಣೆಯಾಗಿರುವ ಮಹಿಳೆಯ ಬಗ್ಗೆ ಮಾಹಿತಿ ನೀಡಬೇಕು. ನಿಮ್ಮ ಆಡಳಿತದಲ್ಲಿರುವ ದೋಷವೇನು? ಕಾಣೆಯಾಗಿರುವ ಮಹಿಳೆಯರನ್ನು ಪತ್ತೆ ಹಚ್ಚಲು ಏನಾದರೂ ಕ್ರಮಗಳನ್ನು ಕೈಗೊಂಡಿದ್ದೀರಾ?’ ಎಂದೂ ಸಿನ್ಹಾ ಅವರನ್ನು ಪ್ರಶ್ನಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಮಾನವ ಕಳ್ಳ ಸಾಗಣಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇದರ ವಿರುದ್ಧವೂ ನವಾಬ್ ಧ್ವನಿ ಎತ್ತಿದ್ದಾರೆ.
ಈ ಮಾಹಿತಿಯನ್ನು ಆಧರಿಸಿ ಇಲ್ಲಿನ ಪ್ರೆಸ್ ಕಾಲೋನಿಯಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ಕಾರ್ಯಕರ್ತರು ಫಲಕಗಳನ್ನು ಹಿಡಿದು ಗುರುವಾರ ಪ್ರತಿಭಟನೆ ನಡೆಸಿದೆ.
2019ರಿಂದ 21ರ ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 8,617 ಮಹಿಳೆಯರು ಹಾಗೂ 1,148 ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಎನ್‌ಸಿಆರ್‌ಬಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.