ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೊ ಮತ್ತೊಂದು ಸಾಹಸ: ನಿಗದಿತ ಕಕ್ಷೆ ತಲುಪಿದ ಆದಿತ್ಯ ಎಲ್-1 ನೌಕೆ!

ಆದಿತ್ಯ ಎಲ್-1 ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಯಾನ ಮಾಡಿ ನಿಗದಿತ ಕಕ್ಷೆ ಸೂರ್ಯನ ಲಾಗ್ರೇಂಜ್ ಪಾಯಿಂಟ್ ಎಲ್‌1 ಅನ್ನು ಸುರಕ್ಷಿತವಾಗಿ ತಲುಪಿದೆ. ಅನ್ವೇಷಣೆ ಆರಂಭ.
Published 6 ಜನವರಿ 2024, 11:17 IST
Last Updated 6 ಜನವರಿ 2024, 11:17 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕಳುಹಿಸಿರುವ ಆದಿತ್ಯ ಎಲ್-1 ನೌಕೆ ನಿಗದಿತ ಕಕ್ಷೆ ತಲುಪಿದೆ.

ಈ ಬಗ್ಗೆ ಶನಿವಾರ ಇಸ್ರೊದ ‘ಆದಿತ್ಯ ಎಲ್-1 ಯೋಜನೆ’ X ಖಾತೆ ಮಾಹಿತಿ ಹಂಚಿಕೊಂಡಿದೆ.

‘ಆದಿತ್ಯ ಎಲ್-1 ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಯಾನ ಮಾಡಿ ನಿಗದಿತ ಕಕ್ಷೆ ಸೂರ್ಯನ ಲಾಗ್ರೇಂಜ್ ಪಾಯಿಂಟ್ ಎಲ್‌1 ಅನ್ನು ಸುರಕ್ಷಿತವಾಗಿ ತಲುಪಿದೆ’ ಎಂದು ತಿಳಿಸಿದೆ.

‘ಸೂರ್ಯನ ಬಗೆಗಿನ ನಿಗೂಢ ವಿಷಯಗಳನ್ನು ಪತ್ತೆಹಚ್ಚಲು ಆದಿತ್ಯ ಎಲ್ 1 ಭೂಮಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲಿದೆ’ ಎಂದು ತಿಳಿಸಿದೆ.

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಆದಿತ್ಯ ಎಲ್ 1 ತನ್ನ ನಿಗದಿತ ಕಕ್ಷೆಯನ್ನು ತಲುಪಿದೆ. ಈ ಮೂಲಕ ಭಾರತ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದು ನಮ್ಮ ವಿಜ್ಞಾನಿಗಳ ನಿರಂತರ ಪರಿಶ್ರಮದಿಂದ ಸಾಧ್ಯವಾಗಿದೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಆದಿತ್ಯ ನೌಕೆಯ ಹೊಸ ಸಾಹಸದ ಮೂಲಕ ಸೂರ್ಯನ ನಿಗೂಢಗಳನ್ನು ಪತ್ತೆ ಹಚ್ಚಿ ಮಾನವೀಯತೆ ನೆಲೆಗಟ್ಟಿನಲ್ಲಿ ವಿಜ್ಞಾನ ಬೆಳೆಸಲು ಶ್ರಮಿಸೋಣ’ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 2ರಂದು ಶ್ರೀಹರಿಕೋಟದ ಇಸ್ರೊ ಉಡಾವಣಾ ಕೇಂದ್ರದಿಂದ 'ಆದಿತ್ಯ–ಎಲ್‌ 1' ಬಾಹ್ಯಾಕಾಶ ನೌಕೆ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್‌ ನಭಕ್ಕೆ ಚಿಮ್ಮಿತ್ತು. ಸೂರ್ಯನ ಅಧ್ಯಯನಕ್ಕಾಗಿ ಭಾರತ ನಡೆಸಿದ ಚೊಚ್ಚಲ ಯೋಜನೆ ಇದಾಗಿದೆ.

ಆದಿತ್ಯ ಎಲ್‌ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಒಟ್ಟು ಏಳು ಉಪಕರಣಗಳು ಇವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಗ್ರೇಂಜ್ ಬಿಂದುವಿನಲ್ಲಿ ಆದಿತ್ಯ ಎಲ್‌–1 ಅಂತರಿಕ್ಷ ವೀಕ್ಷಣಾಲಯವನ್ನು ಇರಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಇದು ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.

ನೌಕೆಯಲ್ಲಿರುವ ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT