ನವದೆಹಲಿ: ಜಾಗತಿಕ ಸಂಶೋಧಕರ ಅಧ್ಯಯನಕ್ಕಾಗಿ ಚಂದ್ರಯಾನ-3 ಯೋಜನೆಯಿಂದ ಸಂಗ್ರಹಿಸಲಾದ ವೈಜ್ಞಾನಿಕ ದತ್ತಾಂಶವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಇಂದು (ಶುಕ್ರವಾರ) ಬಿಡುಗಡೆಗೊಳಿಸಿದೆ.
ಚಂದ್ರಯಾನ–3ಯೋಜನೆ ಯಶಸ್ಸಿನ ಮೊದಲ ವರ್ಷಾಚರಣೆ ಅಂಗವಾಗಿ ಇಂದು ಚೊಚ್ಚಲ 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಆಚರಿಸಲಾಯಿತು.
ವಿಕ್ರಮ್ ಲ್ಯಾಂಡರ್‌ನ ಮೂರು ಮತ್ತು ಪ್ರಗ್ಯಾನ್ ರೋವರ್‌ನ ಎರಡು ಸೇರಿದಂತೆ ಐದು ಪೆಲೋಡ್‌ಗಳಿಂದ 55 ಗಿಗಾಬೈಟ್‌ಗಳಷ್ಟು ಮಾಹಿತಿ ಹಂಚಲು ಇಸ್ರೊ ಅನುಮತಿ ನೀಡಿದೆ.
'ದೇಶ, ವಿದೇಶದ ಸಂಶೋಧಕರ ಅಧ್ಯಯನಕ್ಕೆ ಅನುಕೂಲವಾಗಲು ದತ್ತಾಂಶವನ್ನು ಲಭ್ಯವಾಗುವಂತೆ ಮಾಡಲಾಗುವುದು' ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 23ರಂದು ಚಂದ್ರಯಾನ–3ರ ಭಾಗವಾಗಿ ಕಳುಹಿಸಿದ್ದ 'ವಿಕ್ರಮ ಲ್ಯಾಂಡರ್' ಚಂದ್ರನ ಅಂಗಳಕ್ಕೆ ಇಳಿದಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆಗೂ ಭಾರತ ಪಾತ್ರವಾಗಿತ್ತು.