ಶ್ರೀಹರಿಕೋಟ: ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ 'ಆದಿತ್ಯ–ಎಲ್ 1' ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ಉಡ್ಡಯನಗೊಳಿಸಿದೆ.
ಶ್ರೀಹರಿಕೋಟದ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 11.50ಕ್ಕೆ ಆದಿತ್ಯ ಎಲ್1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ–ಸಿ 57 ರಾಕೆಟ್ ನಭಕ್ಕೆ ಚಿಮ್ಮಿತು. ದೇಶದೆಲ್ಲೆಡೆ ಲಕ್ಷಾಂತರ ಮಂದಿ ಇಸ್ರೊ ನೇರಪ್ರಸಾರದ ಮೂಲಕ 'ಆದಿತ್ಯ–ಎಲ್ 1' ಬಾಹ್ಯಾಕಾಶ ನೌಕೆಯ ಉಡ್ಡಯನವನ್ನು ಕಣ್ತುಂಬಿಕೊಂಡರು.
ಸೂರ್ಯನ ಅಧ್ಯಯನಕ್ಕಾಗಿ ಭಾರತ ನಡೆಸಿದ ಚೊಚ್ಚಲ ಯೋಜನೆ ಇದಾಗಿದೆ.
LIVE | ಆದಿತ್ಯ–ಎಲ್1 ನೌಕೆ ಹೊತ್ತು ನಭಕ್ಕೆ ಜಿಗಿದ ಪಿಎಸ್‌ಎಲ್‌ವಿ–ಸಿ57
ಆದಿತ್ಯ ಎಲ್ 1 ಅನ್ನು ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಒಟ್ಟು ಏಳು ಉಪಕರಣಗಳು ಇರಲಿವೆ. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿರುವ ಲಾಂಗ್ರೇಜ್ ಎಲ್ ಒನ್ ಬಿಂದುವಿನಲ್ಲಿ ಆದಿತ್ಯ ಎಲ್–1 ಅಂತರಿಕ್ಷ ವೀಕ್ಷಣಾಲಯವನ್ನುಇರಿಸಲಾಗುವುದು. ಇದು ಯಾವುದೇ ಅಡಚಣೆ ಇಲ್ಲದೆ ನಿರಂತರವಾಗಿ ಸೂರ್ಯನಲ್ಲಿ ನಡೆಯುವ ಸೌರ ಚಟುವಟಿಕೆಗಳನ್ನು ಗಮನಿಸುತ್ತದೆ.
ನಾಲ್ಕು ಪ್ರತ್ಯೇಕ ಉಪಕರಣಗಳಿಂದ ಸೂರ್ಯನ ಪ್ರಭಾಗೋಳ, ವರ್ಣಗೋಳ ಮತ್ತು ಕಿರೀಟದ ಅಧ್ಯಯನ ವನ್ನು ನಿರಂತರವಾಗಿ ನಡೆಸಲಿದೆ. ಉಳಿದ ಮೂರು ಉಪಕರಣಗಳು ಅಯಸ್ಕಾಂತ ಕ್ಷೇತ್ರ ಮತ್ತು ಕಣ ಪ್ರವಾಹದ ವೀಕ್ಷಣೆ ನಡೆಸುತ್ತವೆ.