ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಇ ಫಲಿತಾಂಶ: ರಾಜ್ಯದ ಅಮೋಘ್‌ ಸೇರಿ 23 ಅಭ್ಯರ್ಥಿಗಳಿಗೆ ಪೂರ್ಣಾಂಕ

ಜೆಇಇ–ಮೇನ್‌ ಮೊದಲ ಆವೃತ್ತಿಯ ಫಲಿತಾಂಶ ಪ್ರಕಟಿಸಿದ ಎನ್‌ಟಿಎ
Published 13 ಫೆಬ್ರುವರಿ 2024, 10:27 IST
Last Updated 13 ಫೆಬ್ರುವರಿ 2024, 10:27 IST
ಅಕ್ಷರ ಗಾತ್ರ

ನವದೆಹಲಿ: ಅಖಿಲ ಭಾರತ ಮಟ್ಟದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ಪ್ರಸಕ್ತ ವರ್ಷದಲ್ಲಿ ನಡೆದ ಜೆಇಇ– ಮೇನ್‌ (2024) ಮೊದಲ ಆವೃತ್ತಿಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಕರ್ನಾಟಕದ ಅಮೋಘ್‌ ಅಗ್ರವಾಲ್‌ ಸೇರಿದಂತೆ 23 ಅಭ್ಯರ್ಥಿಗಳು ಪೂರ್ಣ 100 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.

ಈ ಪೈಕಿ ತೆಲಂಗಾಣದಿಂದ ಏಳು ಅಭ್ಯರ್ಥಿಗಳು ಪೂರ್ಣ 100 ಅಂಕಗಳನ್ನು ಪಡೆದಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ತಿಳಿಸಿದೆ.

ಆಂಧ್ರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದಿಂದ ತಲಾ ಮೂವರು, ಹರಿಯಾಣ, ದೆಹಲಿಯಿಂದ ತಲಾ ಇಬ್ಬರು, ಗುಜರಾತ್‌, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದ ತಲಾ ಒಬ್ಬರು ಪೂರ್ಣಾಂಕಗಳನ್ನು ಪಡೆದಿದ್ದಾರೆ. ಇವರೆಲ್ಲರೂ ಯುವಕರಾಗಿದ್ದಾರೆ.

ಒಟ್ಟಾರೆ 291 ನಗರಗಳಲ್ಲಿನ (ವಿದೇಶಗಳಲ್ಲಿನ 21 ನಗರಗಳೂ ಸೇರಿ) 544 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ನೋಂದಾಯಿಸಿದ್ದ 12.21 ಲಕ್ಷ ಅಭ್ಯರ್ಥಿಗಳ ಪೈಕಿ 11.70 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.  

ಬಿಗಿ ಭದ್ರತೆಯಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಪರೀಕ್ಷಾ ಅಕ್ರಮ, ಅವ್ಯವಹಾರ ತಡೆಗಟ್ಟಲು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಲೈವ್‌ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿತ್ತು.  ಮೊಬೈಲ್‌ ಫೋನ್‌ ಅಥವಾ ಇತರ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಿ ನಕಲು ಮಾಡುವುದನ್ನು ತಡೆಯಲು ಎಲ್ಲ ಕೇಂದ್ರಗಳಲ್ಲೂ ಮೊಬೈಲ್‌ ನೆಟ್‌ವರ್ಕ್ ಜಾಮರ್‌ಗಳನ್ನು ಅಳವಡಿಸಲಾಗಿತ್ತು.

ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಮತ್ತು ಮೇಲ್ವಿಚಾರಣೆ ಮಾಡಲು ಕೇಂದ್ರ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿತ್ತು. 2 ರಾಷ್ಟ್ರೀಯ ಸಂಯೋಜಕರು, 18 ಪ್ರಾದೇಶಿಕ ಸಂಯೋಜಕರು, 303 ನಗರ ಸಂಯೋಜಕರು, 1,083 ವೀಕ್ಷಕರು, 150 ತಾಂತ್ರಿಕ ವೀಕ್ಷಕರು ಹಾಗೂ 162 ಉಪ ವೀಕ್ಷಕರನ್ನು ನಿಯೋಜಿಸಲಾಗಿತ್ತು.

ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆದಿತ್ತು.

ಇದೇ ಮೊದಲ ಬಾರಿಗೆ ಅಬುಧಾಬಿ, ಹಾಂಗ್‌ಕಾಂಗ್ ಮತ್ತು ಓಸ್ಲೊ ನಗರಗಳಲ್ಲಿಯೂ ಪರೀಕ್ಷೆ ನಡೆಸಲಾಗಿತ್ತು. ಅಲ್ಲದೆ ಮನಾಮ, ದೋಹಾ, ಕಠ್ಮಂಡು, ಮಸ್ಕತ್‌, ರಿಯಾದ್‌, ಶಾರ್ಜಾ, ಸಿಂಗಪುರ, ಕುವೈತ್‌ ಸಿಟಿ, ಕೌಲಾಲಂಪುರ, ಲಾಗೋಸ್‌/ಅಬುಜಾ, ಕೊಲಂಬೊ, ಜಕಾರ್ತ, ಮಾಸ್ಕೊ, ಒಟ್ಟಾವಾ, ಪೋರ್ಟ್‌ ಲೂಯಿಸ್‌, ಬ್ಯಾಂಕಾಕ್‌ ಮತ್ತು ವಾಷಿಂಗ್ಟನ್‌ ಡಿಸಿಯಲ್ಲೂ ಪರೀಕ್ಷೆಯನ್ನು ನಡೆಸಲಾಗಿತ್ತು ಎಂದು ಎನ್‌ಟಿಎ ತಿಳಿಸಿದೆ.

ಜೆಇಇ ಮೇನ್‌ ಪರೀಕ್ಷೆಯ ಮೊದಲ ಆವೃತ್ತಿಯು ಜನವರಿ– ಫೆಬ್ರುವರಿಯಲ್ಲಿ ನಡೆದಿತ್ತು. ಎರಡನೇ ಆವೃತ್ತಿಯನ್ನು ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಎರಡೂ ಆವೃತ್ತಿಗಳ ಫಲಿತಾಂಶ ಆಧರಿಸಿ, ಜೆಇಇ– ಅಡ್ವಾನ್ಸ್ಡ್‌ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. 

ಈ ಪರೀಕ್ಷೆಯು ದೇಶದ 23 ಪ್ರಮುಖ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ( ಐಐಟಿ) ಪ್ರವೇಶ ಪಡೆಯಲು ಇರುವ ಒಂದು ಮಾನದಂಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT