ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಕೌಟುಂಬಿಕ ಹಿನ್ನೆಲೆ ಕುರಿತ ಮಾತಿನ ವಿವಾದ: ದಿಲೀಪ್‌ಗೆ ನೋಟಿಸ್ ನೀಡಿದ ನಡ್ಡಾ

Published 27 ಮಾರ್ಚ್ 2024, 6:26 IST
Last Updated 27 ಮಾರ್ಚ್ 2024, 6:26 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ದಿಲೀಪ್‌ ಘೋಷ್‌ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸಿದ್ದಾರೆ ಎನ್ನಲಾದ ವಿಡಿಯೊ ತುಣುಕು ವಿವಾದಕ್ಕೆ ಕಾರಣವಾಗಿದೆ.

ಮಮತಾ ಬ್ಯಾನರ್ಜಿ ಅವರ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ದಿಲೀಪ್ ಘೋಷ್ ಅವರಿಂದ ಸ್ಪಷ್ಟನೆ ಕೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಘೋಷ್, ‘ನೋಟಿಸ್‌ಗೆ ನಾನು ಪತ್ರದ ಮೂಲಕ ಉತ್ತರಿಸುತ್ತೇನೆ’ ಎಂದು ಹೇಳಿದ್ದಾರೆ.

ಏನಿದು ವಿವಾದ?: ದಿಲೀಪ್‌ ಘೋಷ್‌ ಅವರು ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸಿದ್ದಾರೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಬಿಜೆಪಿ –ಟಿಎಂಸಿ ನಡುವೆ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

‘ಬಂಗಾಳವು ತನ್ನ ಮಗಳನ್ನು ಬಯಸುತ್ತದೆ’ ಎಂಬ ಟಿಎಂಸಿ ಘೋಷವಾಕ್ಯವನ್ನು ಘೋಷ್‌ ಅಣಕಿಸಿದ್ದರು. ‘ಮಮತಾ ಬ್ಯಾನರ್ಜಿ ಗೋವಾಗೆ ಹೋದಾಗ, ತಾನು ಗೋವಾದ ಮಗಳು ಎನ್ನುತ್ತಾರೆ. ತ್ರಿಪುರಾದಲ್ಲಿ ‘ತ್ರಿಪುರಾದ ಮಗಳು’ ಎನ್ನುತ್ತಾರೆ. ಮೊದಲು... ಸ್ಪಷ್ಟಪಡಿಸಲಿ’ ಎಂದು ಹೇಳಿದ್ದರು.

ಇದಕ್ಕೆ ಟಿಎಂಸಿ ತೀಕ್ಷ್ಣ ತಿರುಗೇಟು ನೀಡಿದ್ದು, ‘ಬಿಜೆಪಿ ಸಂಸದ ಘೋಷ್‌ ಹೇಳಿಕೆಯು ಅವರ ದೇಹದಲ್ಲಿ ‘ಕೇಸರಿ ಪಾಳಯದ ಡಿಎನ್‌ಎ’ ಇದೆ ಎನ್ನುವುದನ್ನು ತೋರಿಸುತ್ತದೆ’ ಎಂದು ಹೇಳಿದೆ.

‘ದಿಲೀಪ್ ಘೋಷ್‌ ರಾಜಕೀಯ ನಾಯಕತ್ವಕ್ಕೆ ಕಪ್ಪುಚುಕ್ಕಿ ತಾಯಿ ದುರ್ಗೆಯ ವಂಶಪರಂಪರೆಗೆ ಸವಾಲು ಹಾಕುವುದರಿಂದ ಹಿಡಿದು, ಮಮತಾ ಬ್ಯಾನರ್ಜಿ ಅವರ ಪೂರ್ವಜರನ್ನು ಪ್ರಶ್ನಿಸುವವರೆಗೆ ಅವರು ನೈತಿಕ ದಿವಾಳಿತನದ ಅತ್ಯಂತ ಕೊಳಕು ಆಳದಲ್ಲಿ ಮುಳುಗಿದ್ದಾರೆ’ ಎಂದು ಟಿಎಂಸಿ ‘ಎಕ್ಸ್‌’ನಲ್ಲಿ ಆಕ್ರೋಶ ಹೊರಹಾಕಿದೆ.

‘ಹಿಂದೂ ಧರ್ಮದ ದೇವತೆಗಳಾಗಿರಲಿ ಅಥವಾ ರಾಜ್ಯದ ಮುಖ್ಯಮಂತ್ರಿಯಾಗಿರಲಿ; ಬಂಗಾಳದ ಮಹಿಳೆಯರ ಬಗ್ಗೆ ಘೋಷ್‌ ಅವರಿಗೆ ಎಳ್ಳಷ್ಟೂ ಗೌರವವಿಲ್ಲ ಎಂಬುದು ಸ್ಪಷ್ಟ’ ಎಂದಿದೆ.

ಘೋಷ್‌ ಅವರು ಕ್ಷಮೆಯಾಚಿಸಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿ ಪಂಜಾ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT