ಕೊಚ್ಚಿ: ಚಿತ್ರನಟರಿಂದ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಹಿಂದೆಯೇ, ಮಲಯಾಳ ಸಿನಿಮಾ ಕಲಾವಿದರ ಸಂಘಕ್ಕೆ (ಅಮ್ಮ) ಹಿರಿಯ ನಟ ಮೋಹನ್‌ಲಾಲ್, ಇತರ ಪದಾಧಿಕಾರಿಗಳು ಮಂಗಳವಾರ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನಟರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅನೇಕ ಕಲಾವಿದೆಯರು ಆರೋಪ ಮಾಡಿದ್ದಾರೆ. ಕೆಲವು ಬಂಗಾಳಿ ನಟಿಯರೂ ಆರೋಪಕ್ಕೆ ದನಿಗೂಡಿಸಿದ್ದಾರೆ.
ನಿರ್ದೇಶಕ ರಂಜಿತ್, ನಟರಾದ ಸಿದ್ದೀಕ್, ಮುಖೇಶ್ ಅವರ ವಿರುದ್ಧವೂ ಅರೋಪಗಳು ಕೇಳಿಬಂದಿವೆ. ಮಲಯಾಳ ಚಿತ್ರರಂಗದಲ್ಲಿ ಕಾರ್ಯಸ್ಥಳದಲ್ಲಿ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ನಡೆಯುತ್ತಿದೆ ಎಂಬ ಅಂಶಗಳನ್ನು ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಉಲ್ಲೇಖಿಸಿತ್ತು.
ಮಲಯಾಳ ಚಿತ್ರರಂಗದಲ್ಲಿ ಪ್ರಭಾವಿಯಾಗಿರುವ ಎಎಂಎಂಎ ಕುರಿತು ಹೇಳಿಕೆ ನೀಡಿದ್ದು, ಅಧ್ಯಕ್ಷ ಮೋಹನ್‌ಲಾಲ್ ಸೇರಿ ಎಲ್ಲ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾಗಿ ತಿಳಿಸಿದೆ.
ಮೋಹನ್‌ಲಾಲ್ ಅವರು ಪದಾಧಿಕಾರಿಗಳ ಜೊತೆಗೆ ಆನ್‌ಲೈನ್‌ನಲ್ಲಿ ಸಭೆ ನಡೆಸಿದ್ದರು. ‘ನೈತಿಕ ಹೊಣೆ ಹೊತ್ತು ಈ ತೀರ್ಮಾನ ಕೈಗೊಳ್ಳಲಾಯಿತು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೇಮಾ ಸಮಿತಿ ವರದಿ ಬಹಿರಂಗವಾದ ಬಳಿಕ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ವಿರುದ್ಧ ಸಾಮಾಜಿಕ ಜಾಲತಾಣ, ದೃಶ್ಯ, ಮುದ್ರಣ ಮಾಧ್ಯಮದಲ್ಲಿ ಲೈಂಗಿಕ ದೌರ್ಜನ್ಯ ಆರೋಪ ವ್ಯಕ್ತವಾಗಿತ್ತು.
‘ಸಾಮಾನ್ಯ ಸಭೆ ನಡೆಯಬೇಕಿದೆ. ಆ ಬಳಿಕ ಎರಡು ತಿಂಗಳಲ್ಲಿ ಹೊಸ ಸಮಿತಿ ಅಸ್ತಿತ್ವಕ್ಕೆ ಬರಲಿದೆ. ಅಲ್ಲಿಯವರೆಗೂ ಹಾಲಿ ಸಮಿತಿಯೇ ಹಂಗಾಮಿಯಾಗಿ ಕಾರ್ಯನಿರ್ವಹಿಸಲಿದೆ. ಸಂಘಟನೆ ಬಲಪಡಿಸುವ ಹೊಸ ಸಮಿತಿಯು ಅಸ್ತಿತ್ವಕ್ಕೆ ಬರಲಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅನೇಕ ನಟರು, ಮುಖ್ಯವಾಗಿ ಮಹಿಳೆಯರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ನಟಿ ಶ್ವೇತಾ ಮೆನನ್, ‘ಕಾರ್ಯಕಾರಿ ಸಮಿತಿಯ ತೀರ್ಮಾನ ಸ್ವಾಗತಿಸುತ್ತೇನೆ. ಪೃಥ್ವಿರಾಜ್ ಅವರಂತಹ ಯುವ ನಟರು ಸಂಘಟನೆ ಮುನ್ನಡೆಸಲು ಸಮರ್ಥರಿದ್ದಾರೆ’ ಎಂದು ಹೇಳಿದ್ದಾರೆ.
ಮೋಹನ್‌ಲಾಲ್ ಅವರಂತಹ ನಟರೂ ಈ ಬೆಳವಣಿಗೆಯ ಒತ್ತಡ ಎದುರಿಸಬೇಕಿರುವುದು ಬೇಸರದ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಎಎಂಎಂಎ ಸಂಘಟನೆ ಉತ್ತಮವಾಗಿದೆ. ಆದರೆ, ಕೆಲ ಪದಾಧಿಕಾರಿಗಳು ಸಮಸ್ಯೆಯಾಗಿದ್ದಾರೆ. ಹೊಸ ಸಮಿತಿಯು ಮಹಿಳಾ ಕಲಾವಿದರೆಯ ನೋವುಗಳಿಗೆ ದನಿಯಾಗಲಿ’ ಎಂದು ಆಶಿಸಿದ್ದಾರೆ. ಡಬ್ಬಿಂಗ್ ಕಲಾವಿದೆ ಭಾಗ್ಯಲಕ್ಷ್ಮಿ ಕೂಡ ರಾಜೀನಾಮೆ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಹೇಮಾ ಸಮಿತಿ ವರದಿ ಬಳಿಕ ಆರೋಪಗಳ ತನಿಖೆಗೆ ಏಳು ಸದಸ್ಯರ ವಿಶೇಷ ತನಿಖಾ ತಂಡವನ್ನು ಸರ್ಕಾರ ರಚಿಸಿದೆ. ಆ ಬಳಿಕ ಇನ್ನಷ್ಟು ನಟರು, ನಿರ್ದೇಶಕರ ವಿರುದ್ಧವೂ ಆರೋಪಗಳು ಕೇಳಿಬಂದಿವೆ.
Sexual harassment allegations in the Malayalam film industry | Actor Mohanlal-led A.M.M.A (Association of Malayalam Movie Artists) resigns collectively. All 17 executive members, including Mohanlal, have resigned. pic.twitter.com/htSq3L7eRH
— ANI (@ANI) August 27, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.