ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಯನಾಡು ಭೂಕುಸಿತ | ಸೇನಾ ಕಾರ್ಯಕ್ಕೆ ಮೆಚ್ಚುಗೆ; ವಿದ್ಯಾರ್ಥಿಯ ಹೃದಯಸ್ಪರ್ಶಿ ಪತ್ರ

Published : 7 ಆಗಸ್ಟ್ 2024, 12:51 IST
Last Updated : 7 ಆಗಸ್ಟ್ 2024, 12:51 IST
ಫಾಲೋ ಮಾಡಿ
Comments

ಕೋಯಿಕೋಡ್ (ಕೇರಳ): ಭೂಕುಸಿತ ಪೀಡಿತ ವಯನಾಡು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸೈನಿಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ 3ನೇ ತರಗತಿ ವಿದ್ಯಾರ್ಥಿಯೊಬ್ಬ ಪತ್ರ ಬರೆದಿದ್ದಾನೆ. ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೇನೆಯ ದಕ್ಷಿಣ ಕಮಾಂಡ್ ತನ್ನ ‘ಎಕ್ಸ್‌’ ಖಾತೆಯಲ್ಲಿ ವಿದ್ಯಾರ್ಥಿಯ ಪತ್ರವನ್ನು ಹಂಚಿಕೊಂಡಿದ್ದು, ಮೆಚ್ಚುಗೆ ವ್ಯಕ್ತಿಪಡಿಸಿದೆ.

‘ನಾನು ರಾಯನ್, ನನ್ನ ಪ್ರೀತಿಯ ವಯನಾಡಿನಲ್ಲಿ ಭಾರಿ ಭೂಕುಸಿತದಿಂದ ಹೆಚ್ಚು ಹಾನಿಯಾಗಿದ್ದು, ವಿನಾಶವನ್ನು ಸೃಷ್ಟಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿರುವ ಜನರನ್ನು ನೀವು (ಸೈನಿಕರು) ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಯಿತು’ ಎಂದು ವಿದ್ಯಾರ್ಥಿ ಮಲಯಾಳಂನಲ್ಲಿ ಪತ್ರ ಬರೆದಿದ್ದಾನೆ.

‘ವಯನಾಡ್‌ ಜಿಲ್ಲೆಯ ಚೂರಲ್‌ಮಲದಲ್ಲಿ ಭೂಕುಸಿತದಿಂದ ಸಂಪೂರ್ಣ ಕೊಚ್ಚಿಕೊಂಡು ಹೋಗಿರುವ ಸೇತುವೆಯ ಜಾಗದಲ್ಲಿ ಸೈನಿಕರು ಕಬ್ಬಿಣದ ಹೊಸ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೈನಿಕರು ಕೇವಲ ಬಿಸ್ಕತ್‌ಗಳನ್ನು ತಿಂದು ತಮ್ಮ ಹಸಿವನ್ನು ನೀಗಿಸಿಕೊಳ್ಳುತ್ತಿರುವುದನ್ನು ವಿಡಿಯೊದಲ್ಲಿ ನೋಡಿದ್ದೇನೆ. ಈ ಸನ್ನಿವೇಶ ನನ್ನ ಮನ ಮಿಡಿಯಿತು’ ಎಂದು ಎಎಮ್‌ಎಲ್‌ಪಿ ಶಾಲೆಯಲ್ಲಿ 3ನೇ ತರಗತಿಯ ಓದುತ್ತಿರುವ ವಿದ್ಯಾರ್ಥಿ ರಾಯನ್ ವಿವರಿಸಿದ್ದಾನೆ.

‘ಭವಿಷ್ಯದಲ್ಲಿ ನಾನೂ ಕೂಡ ಭಾರತೀಯ ಸೇನೆಗೆ ಸೇರಿ ದೇಶಕ್ಕಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ’ ಎಂದು ರಾಯನ್ ತಿಳಿಸಿದ್ದಾನೆ.

ಪತ್ರದ ಬಗ್ಗೆ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಸೇನೆಯೂ, ‘ಡಿಯರ್ ಮಾಸ್ಟರ್ ರಾಯನ್, ನಿಮ್ಮ ಮಾತುಗಳು ನಮ್ಮ ಹೃದಯವನ್ನು ಆಳವಾಗಿ ಸ್ಪರ್ಶಿಸಿವೆ. ಪ್ರತಿಕೂಲ ಸನ್ನಿವೇಶಗಳಲ್ಲಿ ನಾವು ಭರವಸೆಯ ದಾರಿದೀಪವಾಗುವ ಗುರಿ ಹೊಂದಿರುತ್ತೇವೆ. ಹಾಗಾಗಿ ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸುತ್ತದೆ. ನಿಮ್ಮಂತಹ ವೀರರು ನೀಡುವ ಸ್ಫೂರ್ತಿಯು ನಮಗೆ ಸೇವೆ ಸಲ್ಲಿಸಲು ಮತ್ತಷ್ಟು ಹುರುಪು ನೀಡುತ್ತದೆ. ನೀವು ಸೇನೆಗೆ ಸೇರುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ. ನೀವು ಸೇನಾ ಸಮವಸ್ತ್ರವನ್ನು ಧರಿಸಿ ನಮ್ಮೊಂದಿಗೆ ನಿಂತುಕೊಳ್ಳಿ. ಎಲ್ಲರೂ ಒಟ್ಟಾಗಿ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡೋಣ. ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು...’ ಎಂದು ತಿಳಿಸಿದೆ.

ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಿಂದಾಗಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ, 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT