ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ಮಾಜಿ ಸಚಿವೆ ಶೈಲಜಾ ಆತ್ಮಕಥೆ ಪಠ್ಯ ಸೇರ್ಪಡೆಗೆ ವಿರೋಧ

Published 24 ಆಗಸ್ಟ್ 2023, 16:13 IST
Last Updated 24 ಆಗಸ್ಟ್ 2023, 16:13 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಮಾಜಿ ಆರೋಗ್ಯ ಸಚಿವೆ ಹಾಗೂ ಸಿಪಿಎಂ ನಾಯಕಿ ಕೆ.ಕೆ. ಶೈಲಜಾ ಅವರ ಆತ್ಮಕಥೆಯನ್ನು ಎಂ.ಎ (ಇಂಗ್ಲಿಷ್‌) ಪಠ್ಯಕ್ರಮಕ್ಕೆ ಸೇರ್ಪಡೆಗೊಳಿಸಿರುವ ಕಣ್ಣೂರು ವಿಶ್ವವಿದ್ಯಾಲಯದ ನಡೆ ವಿವಾದಕ್ಕೆ ಕಾರಣವಾಗಿದೆ.

ವಿಶ್ವವಿದ್ಯಾಲಯದ ಈ ಕ್ರಮಕ್ಕೆ ಕಾಂಗ್ರೆಸ್‌ ಪರವಿರುವ ಉಪನ್ಯಾಸಕರ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರವು ತನ್ನ ಪಟ್ಟಭದ್ರ ಹಿತಾಸಕ್ತಿಯ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಆರೋಪಿಸಿದ ಮರುದಿನವೇ ಈ ವಿಚಾರ ಮುನ್ನೆಲೆಗೆ ಬಂದಿದೆ.

ಶೈಲಜಾ ಅವರ ಆತ್ಮಕಥೆ ‘ಮೈ ಲೈಫ್‌ ಆ್ಯಸ್‌ ಎ ಕಾಮ್ರೆಡ್‌’ ಅನ್ನು ಎಂ.ಎ ಇಂಗ್ಲಿಷ್‌ನ ಮೊದಲ ಸೆಮಿಸ್ಟರ್‌ಗೆ ಪಠ್ಯವಾಗಿ ಸೇರಿಸಲಾಗಿದೆ. ಮಹಾತ್ಮ ಗಾಂಧಿ, ಡಾ. ಬಿ.ಆರ್‌. ಅಂಬೇಡ್ಕರ್‌, ಬುಡಕಟ್ಟು ಹೋರಾಟಗಾರ್ತಿ ಸಿ.ಕೆ. ಜಾನು ಅವರ ಆತ್ಮಕಥೆಗಳನ್ನೂ ಪಠ್ಯದಲ್ಲಿ ಅಳವಡಿಸಲಾಗಿದೆ. 

ಶೈಲಜಾ ಅವರು 2016ರಿಂದ 2021ರ ವರೆಗೆ ಪಿಣರಾಯಿ ವಿಜಯನ್‌ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದರು. ನಿಫಾ ಮತ್ತು ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಶೈಲಜಾ ಅವರ ಕಾರ್ಯ ನಿರ್ವಹಣೆ ಪ್ರಶಂಸೆಗೆ ಪಾತ್ರವಾಗಿತ್ತು.

ರಾಜ್ಯದ ಹೈಯರ್‌ ಸೆಕೆಂಡರಿ ಶಿಕ್ಷಣವನ್ನು ಸಿಪಿಎಂ ಸರ್ಕಾರ ರಾಜಕೀಯಕರಣ ಮಾಡುತ್ತಿದೆ ಎಂದು ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರು ಈಚೆಗೆ ಆರೋಪಿಸಿದ್ದರು. ಕಣ್ಣೂರು ವಿಶ್ವವಿದ್ಯಾಲಯದ ಕುರಿತೂ ಅವರು ಆರೋಪ ಮಾಡಿದ್ದರು.

ಮಹಾತ್ಮ ಗಾಂಧಿ ಹತ್ಯೆ ಕುರಿತ ಪಾಠವಿರುವ ಹೈಯರ್‌ ಸೆಕೆಂಡರಿ ಶಾಲೆಯ ಪಠ್ಯಪುಸ್ತಕವನ್ನು ಮುಖ್ಯಮಂತ್ರಿ ಈಚೆಗೆ ಬಿಡುಗಡೆಗೊಳಿಸಿದ್ದರು. ಈ ಪಠ್ಯವನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದೆ. ಈ ಪಾಠವನ್ನು ಈ ಹಿಂದೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಪಠ್ಯದಿಂದ ತೆಗೆದು ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT