ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ ಸರ್ಕಾರ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿದ್ದರಿಂದಲೇ ದುರಂತ: ಕೇಂದ್ರ ಸಚಿವ

Published 5 ಆಗಸ್ಟ್ 2024, 11:35 IST
Last Updated 5 ಆಗಸ್ಟ್ 2024, 11:35 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ಸರ್ಕಾರವು ಅಕ್ರಮವಾಗಿ ವಸತಿ ಪ್ರದೇಶಗಳನ್ನು ವಿಸ್ತರಿಸಿದ್ದು ಹಾಗೂ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದೇ ಸರಣಿ ಭೂಕುಸಿತಕ್ಕೆ ಕಾರಣ ಎಂದು ಕೇಂದ್ರ ಪರಿಸರ ಸಚಿವ ಭೂಫೇಂದರ್‌ ಯಾದವ್‌ ಸೋಮವಾರ ಆರೋಪಿಸಿದ್ದಾರೆ.

ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟದ 56,826 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕಳೆದವಾರ ಕರಡು ಅಧಿಸೂಚನೆ ಹೊರಡಿಸಿದೆ.

ಈ ಕುರಿತು ಮಾತನಾಡಿರುವ ಯಾದವ್‌, ಅಧಿಸೂಚನೆಗೆ ಸಂಬಂಧಿಸಿದಂತೆ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

'ಅರಣ್ಯ ಪ್ರದೇಶಗಳ ಮೇಲಿನ ಹಕ್ಕು ರಾಜ್ಯಗಳಿಗೆ ಇರುವುದರಿಂದ, ಪರಿಸರ ಸೂಕ್ಷ್ಮ ಪ್ರದೇಶ ವಿಚಾರವಾಗಿ ಇರುವ ತಮ್ಮ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಅರಣ್ಯ ಇಲಾಖೆಯ ಮಾಜಿ ಮಹಾನಿರ್ದೇಶಕ ಸಂಜಯ್ ಕುಮಾರ್ ನೇತೃತ್ವದ ಸಮಿತಿಗೆ ಸಲ್ಲಿಸುವಂತೆ ಕೇಳಿದ್ದೇವೆ. ಸ್ಥಳೀಯ ಪಾಲುದಾರರೊಂದಿಗೂ ಸಮಾಲೋಚನೆ ನಡೆಸಬೇಕಿದೆ. ಅದನ್ನು ಬಿಟ್ಟು, ವಸತಿ ಪ್ರದೇಶಗಳ ವಿಸ್ತರಣೆ ಮತ್ತು ಗಣಿಗಾರಿಕೆಗೆ (ಕೇರಳದಲ್ಲಿ) ಅಕ್ರಮವಾಗಿ ಅನುಮತಿ ನೀಡಿದ್ದರ ಪರಿಣಾಮವಾಗಿ (ವಯನಾಡಿನಲ್ಲಿ) ಪ್ರಾಕೃತಿಕ ವಿಕೋಪ ಸಂಭವಿಸಿದೆ' ಎಂದು ಆರೋಪಿಸಿದ್ದಾರೆ. ಆ ಮೂಲಕ ವಯನಾಡು ದುರಂತಕ್ಕೆ ಕೇರಳ ಸರ್ಕಾರವೇ ಕಾರಣ ಎಂದು ದೂರಿದ್ದಾರೆ.

'ಪಶ್ಚಿಮ ಘಟ್ಟಗಳು ಹಿಮಾಲಯದಂತೆಯೇ ಸೂಕ್ಷ್ಮ ಪ್ರದೇಶವಾಗಿದೆ. ವಿಪತ್ತುಗಳನ್ನು ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಅದನ್ನು ಖಾತ್ರಿಪಡಿಸುವ ಹೊಣೆ ಕೇರಳ ಸರ್ಕಾರದ್ದೂ ಆಗಿದೆ' ಎಂದಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿನ ಅಪರೂಪದ ಜೀವ ವೈವಿಧ್ಯ, ನದಿಗಳು, ನೈಸರ್ಗಿಕ ಸಂಪತ್ತು, ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುವ ಉದ್ದೇಶದಿಂದ 59,940 ಚ.ಕಿ.ಮೀ ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಸಂರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ಸಮಿತಿಯು 2013ರಲ್ಲಿ ವರದಿ ಸಲ್ಲಿಸಿತ್ತು. ಈ ಸಮಿತಿಯ ಶಿಫಾರಸಿಗಿಂತ 3,114 ಚ.ಕಿ.ಮೀನಷ್ಟು ಕಡಿಮೆ ಭೂ ಪ್ರದೇಶವನ್ನು ಹೊಸ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದೆ. ಆದರೆ, ಅದನ್ನು ಅಂತಿಮಗೊಳಿಸಲು ಪಶ್ಟಿಮ ಘಟ್ಟವನ್ನು ಹೊಂದಿರುವ ರಾಜ್ಯಗಳ ಒಪ್ಪಿಗೆ ಪಡೆಯುವುದು ಅಗತ್ಯ.

ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಎರಡು ತಾಲ್ಲೂಕುಗಳ 13 ಗ್ರಾಮಗಳನ್ನು ಒಳಗೊಂಡಂತೆ ಕೇರಳದ 9,993.7 ಚದರ ಕಿ.ಮೀ ವಿಸ್ತೀರ್ಣದಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಹರಡಿದ್ದು, ಅದರಲ್ಲಿ 9,107 ಚ.ಕಿ.ಮೀ ಅರಣ್ಯ ಪ್ರದೇಶ ಮತ್ತು 886.7 ಚ.ಕಿ.ಮೀ ಅರಣ್ಯೇತರ ಪ್ರದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT