ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಸಿಂಹಿಣಿ!

ಗುಜರಾತ್‌ನ ಆಮ್ರೇಲಿ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಹೆಣ್ಣು ಸಿಂಹವೊಂದು ಮುಳುಗಿ ಮೃತಪಟ್ಟಿರುವ ವಿಲಕ್ಷಣ ಘಟನೆ ನಡೆದಿದೆ.
Published 17 ಫೆಬ್ರುವರಿ 2024, 10:40 IST
Last Updated 17 ಫೆಬ್ರುವರಿ 2024, 10:40 IST
ಅಕ್ಷರ ಗಾತ್ರ

ಆಮ್ರೇಲಿ, ಗುಜರಾತ್‌: ಗುಜರಾತ್‌ನ ಆಮ್ರೇಲಿ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಹೆಣ್ಣು ಸಿಂಹವೊಂದು ಮುಳುಗಿ ಮೃತಪಟ್ಟಿರುವ ವಿಲಕ್ಷಣ ಘಟನೆ ನಡೆದಿದೆ.

ಸುಮಾರು 5ರಿಂದ8 ವರ್ಷದ ಸಿಂಹಿಣಿ ಆಮ್ರೇಲಿ ಜಿಲ್ಲೆಯ ಜಾಫ್ರಾಬಾದ್ ಅರಣ್ಯ ವಲಯದ ಧಾರಾ ಬಂದರ್ ಎಂಬ ಹಳ್ಳಿಯ ಕರಾವಳಿಯಲ್ಲಿ ಮುಳುಗಿ ಮೃತಪಟ್ಟಿರುವುದನ್ನು ಜುನಾಗಢ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಕೆ. ರಮೇಶ್ ಖಚಿತಪಡಿಸಿದ್ದಾರೆ.

‘ಫೆಬ್ರುವರಿ 15 ರ ಸಂಜೆ ಸಿಂಹಿಣಿಯ ಕಳೇಬರ ಪತ್ತೆಯಾಗಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಶ್ವಾಸಕೋಶದಲ್ಲಿ ನೀರು ಸೇರಿಯೇ ಮೃತಪಟ್ಟಿದೆ. ಸಿಂಹಿಣಿಯ ಉಗುರು ಹಾಗೂ ಹಲ್ಲುಗಳು ಯಥಾಸ್ಥಿತಿಯಲ್ಲಿವೆ’ ಎಂದು ಕೆ. ರಮೇಶ್ ತಿಳಿಸಿದ್ದಾರೆ.

‘ಸಮುದ್ರದಲ್ಲಿ ಮುಳುಗಿ ಸಿಂಹಗಳು ಮೃತಪಟ್ಟಿರುವ ಘಟನೆ ನಡೆದಿವೆ. ಹಾಗಂತ ಇದು ಸಾಮಾನ್ಯ ಘಟನೆ ಅಲ್ಲ. ತನಿಖೆ ನಡೆಯುತ್ತಿದೆ. ಇನ್ನೂ ನಿಖರ ಮಾಹಿತಿಗೆ ಮೃತ ಸಿಂಹಿಣಿಯ ದೇಹದ ಕೆಲ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

‘ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಈ ಸಿಂಹಿಣಿಯ ಸಾವಿನ ಹಿಂದೆ ಸದ್ಯದ ಮಟ್ಟಿಗೆ ಯಾವುದೇ ಬೇಟೆಗಾರರ ಅಥವಾ ಕಳ್ಳಸಾಗಣೆದಾರರ ಕೈವಾಡ ಕಂಡು ಬಂದಿಲ್ಲ’ ಎಂದು ಕೆ. ರಮೇಶ್ ವಿವರಿಸಿದ್ದಾರೆ.

ಪ್ರಪಂಚದಲ್ಲಿಯೇ ಏಷಿಯಾಟಿಕ್ ಸಿಂಹಗಳ ಏಕೈಕ ಆವಾಸಸ್ಥಾನವಾಗಿರುವ ಗುಜರಾತ್‌ನ ಗಿರ್ ಅಭಯಾರಣ್ಯಕ್ಕೆ ಹೊಂದಿಕೊಂಡು ಆಮ್ರೇಲಿ ಜಿಲ್ಲೆಯೂ ಇದೆ. ಸುಮಾರು 30 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ಗಿರ್ ಅರಣ್ಯ ಹರಡಿದ್ದು ಇಲ್ಲಿ ಸದ್ಯ 674 ಏಷಿಯಾಟಿಕ್ ಸಿಂಹಗಳು ಇವೆ.

2022–23 ರಲ್ಲಿ ಒಟ್ಟು 239 ಸಿಂಹಗಳು ಮೃತಪಟ್ಟಿವೆ. ಇದರಲ್ಲಿ 126 ಮರಿಗಳೂ ಸೇರಿದ್ದವು. 29 ಸಿಂಹಗಳು ಅಸಹಜವಾಗಿ ಮೃತಪಟ್ಟಿವೆ ಎಂದು ಗುಜರಾತ್ ಸರ್ಕಾರ ಇತ್ತೀಚೆಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT