ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Polls 2024: ಕಾಂಗ್ರೆಸ್‌–ಎಎಪಿ ನಡುವೆ ಸೀಟು ಹಂಚಿಕೆ ಘೋಷಣೆ

Published 24 ಫೆಬ್ರುವರಿ 2024, 7:01 IST
Last Updated 24 ಫೆಬ್ರುವರಿ 2024, 7:01 IST
ಅಕ್ಷರ ಗಾತ್ರ

ನವದೆಹಲಿ: ‘ಇಂಡಿಯಾ’ ಮೈತ್ರಿಕೂಟದ ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷ (ಎಎಪಿ) ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯನ್ನು ಶನಿವಾರ ಅಂತಿಮಗೊಳಿಸಿವೆ. ದೆಹಲಿ, ಗುಜರಾತ್‌, ಹರಿಯಾಣ, ಗೋವಾ ಹಾಗೂ ಚಂಡೀಗಢದಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. 

ದೆಹಲಿಯ ನಾಲ್ಕು ಕ್ಷೇತ್ರಗಳಲ್ಲಿ ಎಎಪಿ ಹಾಗೂ ಮೂರರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿವೆ. ಅಹ್ಮದ್‌ ಪಟೇಲ್‌ ಕುಟುಂಬಕ್ಕೆ ಭಾವನಾತ್ಮಕ ನಂಟು ಇರುವ ಗುಜರಾತ್‌ನ ಭರೂಚ್‌ ಕ್ಷೇತ್ರವನ್ನು ಎಎಪಿಗೆ ಬಿಟ್ಟುಕೊಡಲು ‘ಕೈ’ ಪಾಳಯ ಒಪ್ಪಿದೆ. ಇದಕ್ಕೆ ಪ್ರತಿಯಾಗಿ ದಕ್ಷಿಣ ಗೋವಾದಿಂದ ಅಭ್ಯರ್ಥಿಯನ್ನು ಹಿಂಪಡೆಯಲು ಎಎಪಿ ಒಪ್ಪಿಗೆ ಸೂಚಿಸಿದೆ. ಹರಿಯಾಣದಲ್ಲಿ ಒಂದು ಸ್ಥಾನವನ್ನು ಎಎಪಿಗೆ ಬಿಟ್ಟುಕೊಡಲು ಕಾಂಗ್ರೆಸ್‌ ನಿರ್ಧರಿಸಿದೆ. ಚಂಡೀಗಢದ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. ಎಎಪಿ ಈ ಹಿಂದೆ ಬೆನೌಲಿಮ್ ಶಾಸಕ ವೆಂಜಿ ವೆಗಾಸ್ ಅವರನ್ನು ದಕ್ಷಿಣ ಗೋವಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.

ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ನಡುವಿನ ಸೀಟು ಹಂಚಿಕೆ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಎಎಪಿ ಮನವೊಲಿಸಿ ಮೈತ್ರಿ ಮಾಡಿಕೊಳ್ಳುವಲ್ಲಿ ‘ಕೈ’ ಪಾಳಯ ಯಶಸ್ವಿಯಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುನಿಸು ಶಮನ ಮಾಡಿ ಸೀಟು ಹಂಚಿಕೆಯನ್ನು ಶೀಘ್ರದಲ್ಲಿ ಪೂರ್ಣಗೊಳಿಸುವುದು ಕಾಂಗ್ರೆಸ್ ಮುಂದಿರುವ ಪ್ರಮುಖ ಸವಾಲು. ಮಮತಾ ಜತೆಗಿನ ಸಂಧಾನ ಪ್ರಕ್ರಿಯೆಯನ್ನು ಪಕ್ಷ ಆರಂಭಿಸಿದೆ. 

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮುಕುಲ್ ವಾಸ್ನಿಕ್, ‘ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿ ಕ್ಷೇತ್ರಗಳಲ್ಲಿ ಎಎಪಿ ಹಾಗೂ ಚಾಂದಿನಿ ಚೌಕ್, ಈಶಾನ್ಯ ದೆಹಲಿ ಮತ್ತು ವಾಯವ್ಯ ದೆಹಲಿ ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ’ ಎಂದು ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ಸಂದೀಪ್ ಪಾಠಕ್, ಅತಿಶಿ ಮತ್ತು ಸೌರಭ್ ಭಾರದ್ವಾಜ್, ಕಾಂಗ್ರೆಸ್‌ನ ದೀಪಕ್ ಬಬಾರಿಯಾ ಮತ್ತು ಅರವಿಂದರ್ ಸಿಂಗ್ ಲವ್ಲಿ ಇದ್ದರು.

2014 ಮತ್ತು 2019 ರ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಕಳೆದ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಕಾಂಗ್ರೆಸ್ ಮತ್ತು ಎಎಪಿ ಅಭ್ಯರ್ಥಿಗಳಿಗಿಂತ ಹೆಚ್ಚು ಮತ ಪಡೆದಿದ್ದರು.

ಆರಂಭದಲ್ಲಿ, ಪೂರ್ವ ದೆಹಲಿಯನ್ನು ಬಿಟ್ಟುಕೊಡಲು ಎಎಪಿ ಮುಂದಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಪೂರ್ವ ಮತ್ತು ಈಶಾನ್ಯ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಉತ್ಸಾಹ ತೋರಲಿಲ್ಲ. ಮಹಿಳೆ, ದಲಿತ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹರಿಯಾಣದಲ್ಲಿ ಒಂಬತ್ತರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದ್ದು, ಕುರುಕ್ಷೇತ್ರದಲ್ಲಿ ಎಎಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ವಾಸ್ನಿಕ್ ಹೇಳಿದರು. 

ಅದೇ ಸಮಯದಲ್ಲಿ, ‘ವಿಶೇಷ ಸನ್ನಿವೇಶ’ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪಂಜಾಬ್‌ನಲ್ಲಿ ಪರಸ್ಪರ ಹೋರಾಡಲು ಉಭಯ ಪಕ್ಷಗಳು ತೀರ್ಮಾನಿಸಿವೆ. ಈ ರಾಜ್ಯದಲ್ಲಿ ಯಾವುದೇ ಮೈತ್ರಿ ಇರುವುದಿಲ್ಲ. ಅಸ್ಸಾಂನಲ್ಲಿ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಎಎಪಿ ಪ್ರಕಟಿಸಿದೆ. ಈ ಬಗ್ಗೆ ಪಕ್ಷಗಳ ರಾಜ್ಯ ಘಟಕಗಳು ಸಂಧಾನ ನಡೆಸಿ ತೀರ್ಮಾನ ತೆಗೆದುಕೊಳ್ಳಲಿವೆ. 

ಪಂಜಾಬ್ ಕುರಿತ ನಿರ್ಧಾರದ ಬಗ್ಗೆ ಎಎಪಿ ನಾಯಕ ಪಾಠಕ್, ‘ಜನರು ತುಂಬಾ ಬುದ್ಧಿವಂತರು ಮತ್ತು ಅವರು ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಾರೆ’ ಎಂದು ಹೇಳಿದರು. 

ಇಂಡಿಯಾ ಮೈತ್ರಿಕೂಟದ ಪ್ರಚಾರ ಕಾರ್ಯತಂತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು. ಈ ಮೈತ್ರಿಯು ಬಿಜೆಪಿಯ ಲೆಕ್ಕಾಚಾರ ಮತ್ತು ತಂತ್ರವನ್ನು ಬುಡಮೇಲು ಮಾಡಲಿದೆ ಎಂದೂ ಅವರು ತಿಳಿಸಿದರು. 

ಪಟೇಲ್‌ ಕುಟುಂಬದ ಅಸಮಾಧಾನ

ಸೀಟು ಹಂಚಿಕೆ ವ್ಯವಸ್ಥೆ ‍‍ಪ್ರಕಾರ, ಗುಜರಾತ್‌ನ 26 ಕ್ಷೇತ್ರಗಳ ಪೈಕಿ 24ರಲ್ಲಿ ‘ಕೈ’ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಭರೂಚ್‌ ಹಾಗೂ ಭಾವನಗರದಲ್ಲಿ ಎಎಪಿ ಸ್ಪರ್ಧಿಸಲಿದೆ. ಎಎಪಿಯ ಚೈತರ್ ವಾಸವ ಭರೂಚ್‌ನಿಂದ ಮತ್ತು ಉಮೇಶ್‌ಭಾಯ್ ಮಕ್ವಾನಾ ಭಾವನಗರದಿಂದ ಸ್ಪರ್ಧಿಸಲಿದ್ದಾರೆ.

ಭರೂಚ್‌ ಕ್ಷೇತ್ರ ಕೈ ತಪ್ಪಿರುವುದಕ್ಕೆ ಅಹ್ಮದ್‌ ಪಟೇಲ್‌ ಪುತ್ರ ಫೈಸಲ್‌ ಪಟೇಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಕುಟುಂಬಕ್ಕೆ 45 ವರ್ಷಗಳ ಭಾವನಾತ್ಮಕ ನಂಟು ಇರುವ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಫೈಸಲ್‌ ಸಿದ್ಧತೆ ಮಾಡಿಕೊಂಡಿದ್ದರು. ಆತ್ಮಸಾಕ್ಷಿ ಹೊಂದಿರುವ ಕಾರ್ಯಕರ್ತರು ಎಎಪಿ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದ ಅವರು, ಕ್ಷೇತ್ರ ಬಿಟ್ಟುಕೊಡದಂತೆ ಹೈಕಮಾಂಡ್‌ ಮನವೊಲಿಸುತ್ತೇನೆ ಎಂದು ತಿಳಿಸಿದರು. 

‘ಭರೂಚ್ ಉಳಿಸಿಕೊಳ್ಳಲು ಸಾಧ್ಯವಾಗದಿದ್ದಕ್ಕಾಗಿ ಜಿಲ್ಲಾ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ. ಕಾಂಗ್ರೆಸ್ ಅನ್ನು ಬಲಿಷ್ಠಗೊಳಿಸಲು ನಾವು ಮರುಸಂಘಟನೆ ಮಾಡುತ್ತೇವೆ. ಅಹ್ಮದ್ ಪಟೇಲ್ ಅವರ ಪರಂಪರೆಯನ್ನು ನಾವು ವ್ಯರ್ಥವಾಗಲು ಬಿಡುವುದಿಲ್ಲ’ ಎಂದು ಪಟೇಲ್‌ ಪುತ್ರಿ ಮುಮ್ತಾಜ್‌ ಪಟೇಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT