ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಚಾಲನೆ ನೀಡಿದ ಎಎಪಿ

Published 10 ಮಾರ್ಚ್ 2024, 14:51 IST
Last Updated 10 ಮಾರ್ಚ್ 2024, 14:51 IST
ಅಕ್ಷರ ಗಾತ್ರ

ಚಂಡೀಗಢ: ‘ನಮ್ಮ ಪಕ್ಷದ ಜೊತೆ ಧರ್ಮವಿದೆ’ ಎಂದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು, ‘ಧರ್ಮ ಅಥವಾ ಅಧರ್ಮ ಎರಡರಲ್ಲಿ ಒಂದನ್ನು ಆರಿಸಿಕೊಳ್ಳಿ’ ಎಂದು ಹರಿಯಾಣದ ಕುರುಕ್ಷೇತ್ರದಲ್ಲಿ ಭಾನುವಾರ ಹೇಳಿದರು.

ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ಸುಶೀಲ್‌ ಗುಪ್ತಾ ಪರವಾಗಿ ಇಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮತಯಾಚಿಸಿದರು. ಈ ವೇಳೆ ಮಹಾಭಾರತದ ಕೆಲ ಸನ್ನಿವೇಶಗಳನ್ನು ಉಲ್ಲೇಖಿಸಿದ ಅವರು, ಕುರುಕ್ಷೇತ್ರವು ಧರ್ಮಯುದ್ಧ ನಡೆದ ಪವಿತ್ರ ಕ್ಷೇತ್ರ. ಕೌರವರ ಬಳಿ ಎಲ್ಲವೂ ಇತ್ತು. ಆದರೆ ಪಾಂಡವರು ಯುದ್ಧವನ್ನು ಗೆದ್ದರು. ಪಾಂಡವರ ಬಳಿ ಇದ್ದದ್ದು ಶ್ರೀಕೃಷ್ಣ ಮಾತ್ರ. ಹಾಗೆಯೇ, ನಮ್ಮದು ಚಿಕ್ಕ ಪಕ್ಷ. ನಮ್ಮ ಜೊತೆಯೂ ಶ್ರೀಕೃಷ್ಣ ಇದ್ದಾನೆ’ ಎಂದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಉಲ್ಲೇಖಿಸಿ, ‘ಅವರ ಬಳಿ ಎಲ್ಲಾ ಅಧಿಕಾರ ಇದೆ. ಸಿಬಿಐ, ಇ.ಡಿ, ಗುಪ್ತಚರ ಇಲಾಖೆ ಎಲ್ಲವೂ ಇದೆ. ಆದರೆ, ನಮ್ಮ ಬಳಿ ಧರ್ಮವಿದೆ. ಇದು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ. ನೀವು ಧರ್ಮದ ಜೊತೆ ನಿಲ್ಲುತ್ತೀರೋ ಅಥವಾ ಅಧರ್ಮದ ಜೊತೆ ನಿಲ್ಲುತ್ತೀರೋ ಎಂಬುದನ್ನು ನೀವೇ ನಿರ್ಧರಿಸಿ’ ಎಂದು ಮತದಾರರಿಗೆ ಕರೆ ನೀಡಿದರು.

ತಾವು 370 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುವ ಮೂಲಕ ಬಿಜೆಪಿಯು, ‘ನಿಮ್ಮ ಮತದ ಅಗತ್ಯ ನಮಗೆ ಇಲ್ಲ ಎಂದು ಬಹಿರಂಗವಾಗಿ ಹೇಳುತ್ತಿದೆ’ ಎಂದರು.

‘ಭಾರತದಲ್ಲಿ ‘ದೇಶಭಕ್ತ’ ಮತ್ತು ‘ಅಂಧಭಕ್ತ’ ಎಂಬ ಎರಡು ವರ್ಗಗಳ ಜನರಿದ್ದಾರೆ. ದೇಶಭಕ್ತರು ನಮ್ಮ ಜೊತೆ ಬನ್ನಿ. ನಮಗೆ ಅಂಧಭಕ್ತರ ಅಗತ್ಯವಿಲ್ಲ’ ಎಂದರು.

ಹತ್ತು ಲೋಕಸಭಾ ಸ್ಥಾನಗಳಿರುವ ಹರಿಯಾಣದಲ್ಲಿ ಎಎಪಿಯು ಕುರುಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅದರ ಮಿತ್ರಪಕ್ಷ ಕಾಂಗ್ರೆಸ್‌ ಒಂಬತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರೂ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT