ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

SC, ST ಮೀಸಲಾತಿಯಲ್ಲಿ ಕೆನೆಪದರ | SC ತೀರ್ಪಿಗೆ ಕಾಂಗ್ರೆಸ್ ಮೌನವೇಕೆ?: ಮಾಯಾವತಿ

Published 10 ಆಗಸ್ಟ್ 2024, 11:09 IST
Last Updated 10 ಆಗಸ್ಟ್ 2024, 11:09 IST
ಅಕ್ಷರ ಗಾತ್ರ

ಲಖನೌ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆನೆಪದರದವರಿಗೆ ಮೀಸಲಾತಿ ಸೌಲಭ್ಯ ನೀಡಬಾರದು ಎಂದು ಸುಪ್ರೀಂಕೋರ್ಟ್ ಮಾಡಿರುವ ಸಲಹೆಗೆ ಕಾಂಗ್ರೆಸ್ ಮೌನವಾಗಿರುವುದೇಕೆ’ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಶನಿವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಉತ್ತರ ಪ್ರದೇಶದ ಲಖನೌನಲ್ಲಿ ಮಾತನಾಡಿದ ಅವರು, ‘ನಿಷ್ಪರಿಣಾಮಕಾರಿಯಾಗಿರುವ ಮೀಸಲಾತಿಯನ್ನು ಪರಿಣಾಮಕಾರಿಯನ್ನಾಗಿ ಮಾಡಬೇಕು. ಅದಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಪರಿಶಿಷ್ಟ ಜಾತಿಯಲ್ಲಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹೆಚ್ಚು ಹಿಂದುಳಿದವರ ಅಭಿವೃದ್ಧಿಯ ಉದ್ದೇಶದಿಂದ ಆ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಕಲ್ಪಿಸಲು, ಒಳವರ್ಗೀಕರಣ ಮಾಡುವ ಸಾಂವಿಧಾನಿಕ ಅಧಿಕಾರ ರಾಜ್ಯಗಳಿಗೆ ಇದೆ ಎಂಬ ನಿಲುವಿಗೆ ಆರು ನ್ಯಾಯಮೂರ್ತಿಗಳನ್ನೊಳಗೊಂಡ ಪೀಠದಲ್ಲಿ ನಾಲ್ಕು ನ್ಯಾಯಮೂರ್ತಿಗಳು ಒಲವು ತೋರಿದರು. 

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲೂ ಕೆನೆಪದರವನ್ನು ಗುರುತಿಸುವ ನೀತಿಯನ್ನು ರಾಜ್ಯಗಳು ರೂಪಿಸಬೇಕು. ನಂತರ ಮೀಸಲಾತಿಯ ಪ್ರಯೋಜನವನ್ನು ನಿರಾಕರಿಸಬೇಕು’ ಎಂದು ನ್ಯಾ. ಬಿ.ಆರ್. ಗವಾಯಿ ಹೇಳಿದ್ದರು.

‘ಆ. 1ರಂದು ಹೊರಬಿದ್ದ ಈ ಬಹುಮತದ ತೀರ್ಪಿಗೆ ಕಾಂಗ್ರೆಸ್‌ ಏಕೆ ಮೌನ ವಹಿಸಿದೆ. ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ತನ್ನ ನಿಲುವನ್ನು ಏಕೆ ಸ್ಪಷ್ಟಪಡಿಸುತ್ತಿಲ್ಲ. ಮತ್ತೊಂದು ಅರ್ಥದಲ್ಲಿ, ಅಲ್ಲಿಯೂ ಏಕೆ ಆ ಪಕ್ಷ ಮೌನ ವಹಿಸಿದೆ. ಹಾಗಿದ್ದರೆ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಒಪ್ಪಿಕೊಂಡಿದೆಯೇ ಮತ್ತು ಅದನ್ನು ಅನುಷ್ಠಾನಗೊಳಿಸುತ್ತದೆಯೇ’ ಎಂದು ಸಾಲುಸಾಲು ಪ್ರಶ್ನೆಗಳನ್ನು ಮಾಯಾವತಿ ಕೇಳಿದ್ದಾರೆ.

ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಡಳಿತ ಹೊಂದಿರುವ ಆಮ್ ಆದ್ಮಿ ಪಾರ್ಟಿ (ಎಎಪಿ)ಯೂ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಈ ಪಕ್ಷಗಳ ಕುರಿತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರೂ ಎಚ್ಚರಿಕೆಯಿಂದಿರಬೇಕು. ಸಂವಿಧಾನ ಹಾಗೂ ಮೀಸಲಾತಿಯನ್ನು ರಕ್ಷಿಸುವ ಮಾತನಾಡುವ ಈ ಪಕ್ಷಗಳು, 18ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಈ ಸಮುದಾಯಗಳ ಮತಗಳನ್ನು ಕಬಳಿಸಿದವು. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಏಳಿಗೆಯನ್ನೇ ಉದ್ದೇಶವನ್ನಾಗಿಸಿಕೊಂಡಿರುವ ಬಿಎಸ್‌ಪಿಯನ್ನು ಹಾನಿಗೀಡು ಮಾಡಿದವು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ವಿಷಯದಲ್ಲಿ ಎಲ್ಲಾ ಪಕ್ಷಗಳು ತಮ್ಮ ನಿಲುವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಎದುರೇ ಸ್ಪಷ್ಟಪಡಿಸಬೇಕು. ಇದರಿಂದ ಈ ಸಮುದಾಯಗಳಿಗೆ ಈ ಪಕ್ಷಗಳ ನಿಲುವು ಏನೆಂಬುದು ಸ್ಪಷ್ಟವಾಗಲಿದೆ’ ಎಂದಿದ್ದಾರೆ.

‘ಚುನಾವಣಾ ರ‍್ಯಾಲಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂವಿಧಾನದ ಪ್ರತಿಯನ್ನು ಜನರಿಗೆ ತೋರಿಸುತ್ತಿದ್ದರು. ಸಂವಿಧಾನ ಹಾಗೂ ಮೀಸಲಾತಿ ರಕ್ಷಿಸುವ ಮಾತುಗಳನ್ನಾಡುತ್ತಿದ್ದರು. ಆದರೆ ಈಗ ಸಂವಿಧಾನವನ್ನು ಎಲ್ಲಿಯೂ ತೋರಿಸುತ್ತಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಅವರ ಕಂಪನಿಯು ಎಲ್ಲಿಯೂ ಮೀಸಲಾತಿ ಕುರಿತು ಮಾತನಾಡುತ್ತಿಲ್ಲ’ ಎಂದು ಕಿಡಿಯಾಡಿದ್ದಾರೆ.

ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಮಯಾವತಿ, ‘ಬಿಜೆಪಿ ಹಾಗೂ ಪ್ರಧಾನಿಯಿಂದ ಭರವಸೆಗಳು ಬಂದಿವೆ. ಆದರೆ ಅದು ಎಂದಿಗೂ ಕೆಲಸ ಮಾಡದು. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಆಗುವ ನಷ್ಟದ ಕುರಿತು ಇವರು ನಿಲುವು ತೆಗೆದುಕೊಳ್ಳಬೇಕು’ ಎಂದು ಮಾಯಾವತಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT