ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂಗಳು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ; ಸೂಕ್ತ ಕ್ರಮ ಕೈಗೊಳ್ಳಬೇಕು: ಮಾಯಾವತಿ

Published : 13 ಆಗಸ್ಟ್ 2024, 2:19 IST
Last Updated : 13 ಆಗಸ್ಟ್ 2024, 2:19 IST
ಫಾಲೋ ಮಾಡಿ
Comments

ಲಖನೌ: ಸಂಘರ್ಷ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವನ್ನು ಗಂಭೀರವಾಗಿ ಪರಿಗಣಿಸಿ, ಅವರ ಸುರಕ್ಷತೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಕಳೆದ ಕೆಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರವು ಅತ್ಯಂತ ದುಃಖಕರ ಮತ್ತು ಕಳವಳಕಾರಿಯಾಗಿದೆ. ಕೇಂದ್ರ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಮತ್ತಷ್ಟು ತೊಂದರೆಗೆ ಒಳಗಾಗಬಹುದು ಎಂದು ತಿಳಿಸಿದ್ದಾರೆ.

ಸಂಘರ್ಷ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು, ಮನೆಗಳು ಹಾಗೂ ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ವರದಿಯಾಗಿದೆ.

ಶೇಖ್‌ ಹಸೀನಾ ನೇತೃತ್ವದ ಸರ್ಕಾರ ಪತನವಾದ ನಂತರ, ದೇಶದ 52 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಕನಿಷ್ಠ 205 ದಾಳಿಗಳು ನಡೆದಿವೆ ಎಂದು ಎರಡು ಹಿಂದೂ ಸಂಘಟನೆಗಳು ಹೇಳಿವೆ.

ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 560ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಸೀನಾ ನೇತೃತ್ವದ ಸರ್ಕಾರ ಪತನದ ಬಳಿಕ ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದಲ್ಲಿ 232 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಢಾಕಾದಲ್ಲಿ ಪ್ರಧಾನಿ ತಂಗುವ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ್ದರು. ದೇಶದಲ್ಲಿ ಉಂಟಾದ ಅರಾಜಕತೆಗೆ ನಲುಗಿದ ಶೇಕ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು.

ಬಾಂಗ್ಲಾ ಸ್ವಾತಂತ್ರ್ಯ ಸಮರದಲ್ಲಿ ಭಾಗಿಯಾಗಿದ್ದವರ ಸಂಬಂಧಿಕರಿಗೆ ಸರ್ಕಾರದ ಹುದ್ದೆಗಳಲ್ಲಿ ಶೇ 30ರಷ್ಟು ಮೀಸಲಾತಿ ಕಲ್ಪಿಸುವ ವಿವಾದಾತ್ಮಕ ಮೀಸಲು ವ್ಯವಸ್ಥೆಯನ್ನು ಕೊನೆಗೊಳಿಸಬೇಕು ಎಂಬುದು ಪ್ರತಿಭಟನಕಾರರ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT