ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ: ಕೊಚ್ಚಿಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬದ ಆಶ್ಚರ್ಯಕರ ರೀತಿ ರಕ್ಷಣೆ

Last Updated 17 ಜುಲೈ 2018, 5:51 IST
ಅಕ್ಷರ ಗಾತ್ರ

ನವಿ ಮುಂಬೈ: ಪ್ರವಾಹದ ನೀರಿನಲ್ಲಿ ಮುಳುಗಿ ಕೊಚ್ಚಿಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬವನ್ನು ಹಗ್ಗದ ಸಹಾಯದಿಂದ ಸಿನಿಮೀಯರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ನವಿ ಮುಂಬೈನ ತಾಲೋಜಾದಲ್ಲಿ ಘಟನೆ ನಡೆದಿದ್ದು, ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.

ಕಾರು ನೀರಿನಲ್ಲಿ ಬಹುತೇಕ ಮುಳುಗಿದ್ದು, ಕುಟುಂಬ ಕಾರಿನ ಮೇಲೆ ಕುಳಿತಿರುವುದು ವಿಡಿಯೊದಲ್ಲಿದೆ. ಸ್ಥಳೀಯರು ಒಬ್ಬರ ಹಿಂದೆ ಮತ್ತೊಬ್ಬರು ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಅದರ ನೆರವಿನಿಂದ ಸುರಕ್ಷಿತವಾಗಿ ಕುಟುಂಬ ಇರುವ ಸ್ಥಳವನ್ನು ತಲುಪುತ್ತಾರೆ. ಮೊದಲು ಮಹಿಳೆಯನ್ನು ರಕ್ಷಿಸಿ ಕರೆತರುತ್ತಾರೆ. ಬಳಿಕ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿರುವ ದೃಶ್ಯ ಸೆರೆಯಾಗಿದೆ.

ಈ ಘಟನೆ ಸೋಮವಾರ ಮಧ್ಯಾಹ್ನ ತಾಲೋಜಾದ ಘೋಟ್ಗಾಂವ್‌ ಪ್ರದೇಶದಲ್ಲಿ ನಡೆದಿದೆ. ನದಿಯಲ್ಲಿ ನೀರಿನ ರಭಸಕ್ಕೆ ಕಾರು ಕೊಚ್ಚಿಹೋಗಿದೆ. ಕುಟುಂಬ ಕಾರನ್ನು ಹಿಡಿದು ಜೀವ ಉಳಿಸಿಕೊಳ್ಳಲು ಯತ್ನಿಸಿದ್ದು, ಹತಾಶರಾಗಿದ್ದಾರೆ. ಈ ವೇಳೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

37 ವರ್ಷ ವಯಸ್ಸಿನ ಅಶ್ರಫ್‌ ಖಲೀಲ್‌ ಶೇಖ್‌ ಮತ್ತವರ ಪತ್ನಿ ಹಮೀದಾ ಹಾಗೂ ಇಬ್ಬರು ಮಕ್ಕಳನ್ನು ಸ್ಥಳೀಯರು ಕೊಚ್ಚಿಹೋಗುತ್ತಿದ್ದ ಕಾರಿನಿಂದ ಆಶ್ಚರ್ಯಕರವಾಗಿ ರಕ್ಷಿಸಿ, ದಡ ಸೇರಿಸಿದ್ದಾರೆ.

ಭಾರಿ ಮಳೆಯಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಸೇತುವೆ ಮೇಲೆ ಸಾಗುತ್ತಿದ್ದ ಮಧ್ಯಮಗಾತ್ರದ ಕಾರು ಜಾರಿ ನದಿಗೆ ಬಿದ್ದಿದೆ. ಇದೇ ವೇಳೆ ನೀರಿನಮಟ್ಟ ಮತ್ತಷ್ಟು ಹೆಚ್ಚಾಗಿದೆ. ನೀರಿನ ಸೆಳೆತಕ್ಕೆ ಕಾರು ಕೊಚ್ಚಿಹೋಗಲಾರಂಭಿಸಿದೆ. ಅದೃಷ್ಟವಶಾತ್‌ ನದಿಯಲ್ಲಿದ್ದ ಕಲ್ಲುಗಳಿಗೆ ಆತುಕೊಂಡು ಕಾರು ನಿಂತಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸ್ಥಳೀಯರು ಕುಟುಂಬವನ್ನು ಸಂರಕ್ಷಿಸಿದ್ದಾರೆ.

ಸ್ಥಳೀಯ ನಿವಾಸಿಗಳಾದ ನಾರಾಯಣ್‌ ಗಂಗರಾಮ್‌ ಪಾಟೀಲ್‌, ಲಾಹು ನಾರಾಯಣ ಪಾಟೀಲ್‌, ಲಕ್ಷ್ಮಣ್‌ ವಾಮನ್‌ ಧುಮಾಲ್‌, ತುಳಸಿರಾಮ್‌ ಬಾಲಿರಾಮ್‌ ನಿಘಡ್ಕರ್‌ರಾವ್, ರೂಪೇಶ್‌ ರಾಮ ಪಾಟೀಲ್‌ ಅವರು ಒಟ್ಟಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಕುಟುಂಬವನ್ನು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಿಸಲಾಗದ ಕುಟುಂಬದ ಸದಸ್ಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ಪಡೆದ ಬಳಿಕ ಅವರು ಮನೆಗೆ ಹಿಂದಿರುಗಿದ್ದಾರೆ ಎಂದು ಸ್ಥಳೀಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಎನ್‌ಡಿ ಟಿ.ವಿ. ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT