ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ. ಸ್ಟಾಲಿನ್‌ಗೆ ಹಿಂದಿ, ಇಂಗ್ಲಿಷ್ ಮಾತನಾಡಲು ಬರುವುದಿಲ್ಲ: ಅಣ್ಣಾಮಲೈ ಲೇವಡಿ

Published 6 ಆಗಸ್ಟ್ 2023, 9:56 IST
Last Updated 6 ಆಗಸ್ಟ್ 2023, 9:56 IST
ಅಕ್ಷರ ಗಾತ್ರ

ಚೆನ್ನೈ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಲೇವಡಿ ಮಾಡಿದ್ದಾರೆ.

ಹಿಂದಿ ಹೇರಿಕೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯನ್ನು ಎಂ.ಕೆ. ಸ್ಟಾಲಿನ್‌ ಅವರು ಖಂಡಿಸಿದ್ದರು. ಇದೇ ವಿಚಾರ ಪ್ರಸ್ತಾಪಿಸಿ ಅಣ್ಣಾಮಲೈ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

ಸ್ಟಾಲಿನ್‌ ಅವರಿಗೆ ಹಿಂದಿ ಅಥವಾ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಹಾಗಾಗಿ ಗೃಹ ಸಚಿವರು (ಅಮಿತ್ ಶಾ) ಏನು ಹೇಳಿದ್ದಾರೆಂದು ಅವರಿಗೆ ಅರ್ಥವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

‘ನಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ. ಡಿಎಂಕೆ ಇನ್ನೂ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಸ್ಟಾಲಿನ್ ಮತ್ತು ಉದಯನಿಧಿ ಅವರಿಗೆ ಜನರೊಂದಿಗೆ ಮಾತನಾಡಲು ಬೇರೆ ಯಾವುದೇ ವಿಷಯವಿಲ್ಲ. ಪ್ರಧಾನಿ ಮೋದಿ ವಿಶ್ವ ಪ್ರವಾಸದ ವೇಳೆ ತಮಿಳು ಭಾಷೆಯ ಹೆಮ್ಮೆಯ ಬಗ್ಗೆ ಮಾತನಾಡಿದ್ದಾರೆ. ಫ್ರಾನ್ಸ್‌ನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಹೊರಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಸೋಲುವುದು ಖಚಿತ’ ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.

ಏನಿದು ವಿವಾದ?

ಅಧಿಕೃತ ಭಾಷೆ ಕುರಿತು ಸಂಸದೀಯ ಸಮಿತಿಯ 38ನೇ ಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಹಿಂದಿಯನ್ನು ಸ್ವೀಕರಿಸುವುದು ನಿಧಾನವಾದರೂ ಅಂತಿಮವಾಗಿ ನಾವು ಅದನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಲೇಬೇಕು’ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಅಮಿತ್ ಶಾ ಹೇಳಿಕೆಯನ್ನು ತಮಿಳುನಾಡು ಸಿ.ಎಂ. ಎಂ.ಕೆ.ಸ್ಟಾಲಿನ್ ಖಂಡಿಸಿದ್ದರು.

‘ಇದು ಹಿಂದಿ ಮಾತನಾಡದವರನ್ನು ದಮನಿಸುವ ಪ್ರಯತ್ನವಾಗಿದೆ. ತಮಿಳುನಾಡು ಯಾವುದೇ ರೂಪದಲ್ಲಿ ಹಿಂದಿಯ ಪ್ರಾಬಲ್ಯ ಮತ್ತು ಹೇರಿಕೆಯನ್ನು ವಿರೋಧಿಸುತ್ತದೆ. ಏಕೆಂದರೆ ಅದು ಇಂತಹ ಕ್ರಮವನ್ನು ಅನುಮೋದಿಸುವ ರಾಜ್ಯವಲ್ಲ. ನಮ್ಮ ಭಾಷೆ ಮತ್ತು ಪರಂಪರೆ ನಮ್ಮನ್ನು ವ್ಯಾಖ್ಯಾನಿಸುತ್ತವೆ. ನಮ್ಮನ್ನು ಹಿಂದಿಯ ಗುಲಾಮರಾಗಿಸಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಂತೆ ಹಲವಾರು ರಾಜ್ಯಗಳೂ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಹಿಂದಿ ಹೇರಿಕೆಗೆ ಹೆಚ್ಚುತ್ತಿರುವ ಪ್ರತಿರೋಧವನ್ನು ಗಮನಕ್ಕೆ ತೆಗೆದುಕೊಳ್ಳಿ’ ಎಂದು ಸ್ಟಾಲಿನ್ ಕಿಡಿಕಾರಿದ್ದರು.

‘1965ರ ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬೆಂಕಿಯನ್ನು ಮತ್ತೆ ಹೊತ್ತಿಸುವುದು ಅವಿವೇಕದ ನಡೆಯಾಗುತ್ತದೆ. ಬಿಜೆಪಿ ನಾಯಕರು ಅನುಸರಿಸುತ್ತಿರುವ ಸೋಗಿನ ರಾಜಕೀಯದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ತಮಿಳುನಾಡಿಗೆ ಬಂದರೆ ತಮಿಳು ಭಾಷೆಗೆ ಜೇನು ತುಪ್ಪ ಹಚ್ಚುವುದು, ದೆಹಲಿಗೆ ಹೋದಾಗ ನಂಜನ್ನು ಬಿತ್ತರಿಸುವುದು ಬಿಜೆಪಿಯ ರಾಜಕಾರಣ ಎಂಬುದು ನಮಗೆಲ್ಲ ಗೊತ್ತೇ ಇದೆ’ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT