ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ದಿವಸ್‌: ಇಂದಿರಾ ಸ್ಮರಿಸದ ಕೇಂದ್ರ– ಸ್ತ್ರೀ ದ್ವೇಷಿ ನಡೆ ಎಂದ ಪ್ರಿಯಾಂಕಾ

Last Updated 16 ಡಿಸೆಂಬರ್ 2021, 15:44 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ವಿರುದ್ಧದ 1971ರ ಯುದ್ಧದ ಗೆಲುವಿನ 50ನೇ ವರ್ಷಾಚರಣೆ ‘ವಿಜಯ್ ದಿವಸ್’ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರನ್ನು ಸ್ಮರಿಸದಿರುವುದು ವಿವಾದಕ್ಕೆ ಕಾರಣವಾಗಿದೆ.

1971ರಲ್ಲಿ ಇಂದಿರಾಗಾಂಧಿ ಪ್ರಧಾನಿ ಆಗಿದ್ದರು. ಯುದ್ಧದಲ್ಲಿ ಭಾರತೀಯ ಸೇನೆ ಪಾಕ್‌ ಅನ್ನು ಹಿಮ್ಮೆಟ್ಟಿಸಿತ್ತು. ಪಾಕಿಸ್ತಾನದ ಭಾಗವಾಗಿದ್ದ ಬಾಂಗ್ಲಾದೇಶ ಆ ಯುದ್ಧದ ನಂತರ ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದಿತ್ತು.

ವಿಜಯ್ ದಿವಸ್ ಆಚರಣೆ ಸಂದರ್ಭದಲ್ಲಿ ಇಂದಿರಾಗಾಂಧಿ ಅವರನ್ನು ಸ್ಮರಿಸದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್‌ ಪಕ್ಷ, ಕೇಂದ್ರ ಸರ್ಕಾರವು ಸಣ್ಣತನದ ರಾಜಕಾರಣದಲ್ಲಿ ತೊಡಗಿದೆ ಎಂದು ಟೀಕಿಸಿದೆ.

ಬಾಂಗ್ಲಾದೇಶದ ಮುಕ್ತಿಯಲ್ಲಿ ಇಂದಿರಾಗಾಂಧಿ ಮುಖ್ಯ ಪಾತ್ರ ವಹಿಸಿದ್ದನ್ನು ಸರ್ಕಾರ ಗುರುತಿಸದಿರುವುದು ದುರದೃಷ್ಟಕರ ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಯುದ್ಧದಲ್ಲಿ ಉನ್ನತ ನಾಯಕತ್ವ ತೋರಿದ್ದ ಇಂದಿರಾಗಾಂಧಿ ಅವರ ಹೆಸರನ್ನು ಉಲ್ಲೇಖಿಸದೇ ಕೇಂದ್ರ ಸರ್ಕಾರ ಸಣ್ಣತನದ ರಾಜಕಾರಣ ಮಾಡುತ್ತಿದೆ ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲಾ ಆರೋಪಿಸಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ದೇಶದ ಪ್ರಥಮ, ಏಕೈಕ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರನ್ನು ವಿಜಯ್‌ ದಿವಸ್‌ ವೇಳೆ ‘ಸ್ತ್ರೀದ್ವೇಷಿಯಾದ ಬಿಜೆಪಿ ಸರ್ಕಾರ ಮರೆತಿದೆ‘ ಎಂದು ವ್ಯಂಗ್ಯವಾಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್‌ ಉಪನಾಯಕ ಗೌರವ್‌ ಗೊಗೋಯಿ ಅವರು, ಸರ್ಕಾರದ ಕ್ರಮವನ್ನು ಖಂಡಿಸಿದ್ದು ಬಾಂಗ್ಲಾ ಮುಕ್ತಿಗೆ ನಡೆದಿದ್ದ ಯುದ್ಧದಲ್ಲಿ ಇಂದಿರಾ ಗಾಂಧಿ ಕೊಡುಗೆ ಏನು ಎಂಬುದು ಜನರಿಗೆ ತಿಳಿದಿದೆ ಎಂದಿದ್ದಾರೆ.

32 ಗುಂಡಿನೇಟು ತಿಂದಿದ್ದಇಂದಿರಾ ಅವರನ್ನೇ ಮರೆತರು

‘ಇಂದಿರಾಗಾಂಧಿ ದೇಶಕ್ಕಾಗಿ 32 ಗುಂಡಿನೇಟು ತಿಂದಿದ್ದರು. ಆದರೆ, 1971 ಯುದ್ಧದ 50ನೇ ವರ್ಷಾಚರಣೆಯಲ್ಲಿ ಅವರನ್ನೇ ಮರೆತರು’ ಎಂದು ರಾಹುಲ್‌ಗಾಂಧಿ ಟೀಕಿಸಿದ್ದಾರೆ.

‘ಅವರನ್ನು ಸ್ಮರಿಸಲಿಲ್ಲ ಎಂಬುದರಿಂದ ವ್ಯತ್ಯಾಸವೇನೂ ಆಗದು. ಏಕೆಂದರೆ ಅವರು ದೇಶಕ್ಕಾಗಿ ಪ್ರಾಣ ತೆತ್ತರು. ಆಗ ದೇಶ ಒಟ್ಟಾಗಿದ್ದರಿಂದ ಯುದ್ಧದಲ್ಲಿ ಸಾಧನೆ ಸಾಧ್ಯವಾಗಿತ್ತು‘ ಎಂದರು.

ಉತ್ತರಾಖಂಡ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಿಯಿಂದ ಹುತಾತ್ಮರ ಸ್ಮರಣೆ, ನಮನ

1971ರಲ್ಲಿ ಪಾಕ್‌ ವಿರುದ್ಧದ ಯುದ್ಧದಲ್ಲಿ ಹುತಾತ್ಮರಾಗಿದ್ದ ಬಾಂಗ್ಲಾದ ಸ್ವಾತಂತ್ರ್ಯ ಹೋರಾಟಗಾರರು, ಭಾರತೀಯ ಸೇನಾ ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಗೌರವನಮನ ಸಲ್ಲಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ಸೇನಾ ಸಿಬ್ಬಂದಿ ಮತ್ತು ಬಾಂಗ್ಲಾದ ಸ್ವಾತಂತ್ರ್ಯ ಹೋರಾಟಗಾರರ ಸೇವೆ, ತ್ಯಾಗವನ್ನು ಸ್ಮರಿಸುತ್ತೇನೆ. ಒಟ್ಟಾಗಿ ನಾವು ವೈರಿ ದೇಶವನ್ನು ಸೋಲಿಸಿದ್ದೆವು. ಢಾಕಾದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರೂ ಉಪಸ್ಥಿತರಿರುವುದು ಪ್ರತಿ ಭಾರತೀಯನಿಗೆ ಹೆಮ್ಮೆಯ ಕ್ಷಣ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT