ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮರಳುಗಾರಿಕೆಗೆ ಅವಕಾಶ ಇಲ್ಲ: ಹೂಳೆತ್ತುವ ನೆಪದ ವಿರುದ್ಧ ಎನ್‌ಜಿಟಿ ಆದೇಶ

ಫಾಲೋ ಮಾಡಿ
Comments

ನವದೆಹಲಿ: ಜಲಕಾಯಗಳು, ಕೆರೆಗಳು, ಕೊಳಗಳು ಹಾಗೂ ಜೌಗು ಪ್ರದೇಶಗಳಲ್ಲಿ ಹೂಳೆತ್ತುವ ನೆಪದಲ್ಲಿ ಮರಳು ಗಣಿಗಾರಿಕೆ ನಡೆಸುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠ ಆದೇಶಿಸಿದೆ.

ಇಂಡಿ ಕ್ಷೇತ್ರದಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕೆ.ರಾಮಕೃಷ್ಣನ್‌ ಹಾಗೂ ಡಾ.ಸತ್ಯಗೋಪಾಲ್‌ ಕೊರ್ಲಪಾಟಿ ಅವರನ್ನು ಒಳಗೊಂಡ ಪೀಠವು ಶುಕ್ರವಾರ ತೀರ್ಪು ಪ್ರಕಟಿಸಿದೆ.

ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ ಸುಸ್ಥಿರ ಮರಳುಗಾರಿಕೆ ನಿರ್ವಹಣೆ ಮಾರ್ಗಸೂಚಿ– 2016, ಮರಳು ಗಣಿಗಾರಿಕೆಯ ಮೇಲ್ವಿಚಾರಣೆ ಹಾಗೂ ಜಾರಿ ಮಾರ್ಗಸೂಚಿ– 2020 ಹಾಗೂ ಎನ್‌ಜಿಟಿಯ ಪ್ರಧಾನ ಪೀಠ ಹೊರಡಿಸಿರುವ ಮಾರ್ಗಸೂಚಿಯ ಪ್ರಕಾರವೇ ಹೂಳೆತ್ತುವ ಕಾಮಗಾರಿಗಳನ್ನು ನಡೆಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.

ಮರಳು ಗಣಿಗಾರಿಕೆಯ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಪ್ರತಿ ಜಿಲ್ಲೆಯಲ್ಲಿ ಕಾರ್ಯಪಡೆಯನ್ನು ಸ್ಥಾಪಿಸಬೇಕು. ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಾಗ ಗಣಿ ನಿಯಮಗಳ ಅಡಿಯಲ್ಲಿ ದಂಡ ವಿಧಿಸುವ ಹಾಗೂ ಪರಿಸರ ಪರಿಹಾರಗಳನ್ನು ವಸೂಲಿ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ಸೂಚಿಸಿದೆ.

ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು ಪ್ರತಿ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ, ಹೂಳೆತ್ತುವ ಕಾಮಗಾರಿಗಳು, ಜೌಗು ಪ್ರದೇಶಗಳ ಮೇಲೆ ನಿಗಾ ಇಡಬೇಕು. ಒಂದು ವೇಳೆ ಉಲ್ಲಂಘನೆ ‍ಪ್ರಕರಣಗಳು ಕಂಡುಬಂದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಖಬೇಕು ಎಂದು ಪೀಠ ಹೇಳಿದೆ.

ಅರಣ್ಯ, ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯನ್ನು ಕರ್ನಾಟಕ ಸರ್ಕಾರ ಮುಖ್ಯ ಕಾರ್ಯದರ್ಶಿಯವರು ನೇಮಿಸಬೇಕು. ಈ ಸಮಿತಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಣ್ಣ ನೀರಾವರಿ, ಸಣ್ಣ ಕೈಗಾರಿಕೆ ಇಲಾಖೆಗಳ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು, ಕರ್ನಾಟಕ ರಾಜ್ಯ ಜೌಗು ಪ್ರದೇಶ ಪ್ರಾಧಿಕಾರದ ಅಧ್ಯಕ್ಷರು ಈ ಸಮಿತಿಯಲ್ಲಿ ಇರಬೇಕು. ಮರಳು ಗಣಿಗಾರಿಕೆಗೆ ವಿಧಿಸಿರುವ ನಿರ್ಬಂಧಗಳ ಮೇಲೆ ಈ ಸಮಿತಿ ನಿಗಾ ಇಡಬೇಕು. ಪರಿಸರ ಸಚಿವಾಲಯದ ಮಾರ್ಗಸೂಚಿ ಹಾಗೂ ಎನ್‌ಜಿಟಿಯ ನಿರ್ದೇಶನಗಳು ಪಾಲನೆ ಆಗುತ್ತಿವೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಎನ್‌ಜಿಟಿ ಸೂಚಿಸಿದೆ.

ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜಲಕಾಯಗಳ ನಿರ್ವಹಣೆ ಹಾಗೂ ಹೂಳೆತ್ತುವ ನೆಪದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಾರ್ವಭೌಮ ಬಗಲಿ ಅವರು ಎನ್‌ಜಿಟಿಯ ಮೆಟ್ಟಿಲೇರಿದ್ದರು. ಕೇಂದ್ರ ಪರಿಸರ ಸಚಿವಾಲಯದ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಮರಳುಗಾರಿಕೆಗೆ ಅನುವು ಮಾಡಿಕೊಡಲಾಗುತ್ತಿದೆ ಎಂದೂ ಆರೋಪಿಸಿದ್ದರು.

ಕೇಂದ್ರ ಅರಣ್ಯ, ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ಜಂಟಿ ಸಮಿತಿಯನ್ನು ರಚಿಸಿದ್ದ ಎನ್‌ಜಿಟಿ, ಕೊಳ, ಕೆರೆಗಳಲ್ಲಿ ಮರಳು ತೆಗೆಯುವುದರಿಂದ ಪರಿಸರದ ಮೇಲೆ ಹಾನಿಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು. ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿದ್ದ ಜಂಟಿ ಸಮಿತಿಯು ಮೂರು ವರದಿಗಳನ್ನು ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT