ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಬಲ ಚುನಾವಣಾ ಆಯುಕ್ತ ಅಗತ್ಯ: ಸುಪ್ರೀಂ ಕೋರ್ಟ್

ಚುನಾವಣಾ ಆಯೋಗ ದುರ್ಬಲ ಸಂಸ್ಥೆಯಂತಿದೆ
Last Updated 23 ನವೆಂಬರ್ 2022, 20:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):‘ಪ್ರಧಾನಿ ವಿರುದ್ಧ ದೂರು ಬಂದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತಹ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಈಗ ಇರುವ ವ್ಯವಸ್ಥೆ ಅಡಿ ಯಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ‘ಹೌದಪ್ಪ’ ಎನ್ನುವ ಅಧಿಕಾರಿಗಳನ್ನೇ ಆಯುಕ್ತರಾಗಿ ನೇಮಕ ಮಾಡುತ್ತವೆ. ಅಂತಹವರು ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆಯೇ? ಹೀಗಾಗಿ ಪ್ರಬಲ ಚುನಾವಣಾ ಆಯುಕ್ತರ ಅಗತ್ಯ ವಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ನೇಮಕಕ್ಕೆ ಕೊಲಿಜಿಯಂ ಸ್ವರೂಪದ ವ್ಯವಸ್ಥೆ ಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನುನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ಸದಸ್ಯರ ಸಂವಿಧಾನ ಪೀಠವು ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿ ಕುಮಾರ್ ಅವರು ಈ ಪೀಠದಲ್ಲಿದ್ದಾರೆ.

ಈಗ ಚಾಲ್ತಿಯಲ್ಲಿ ಇರುವ ವ್ಯವಸ್ಥೆ ಯಲ್ಲಿ ಕಾರ್ಯದರ್ಶಿ, ಮುಖ್ಯಕಾರ್ಯ ದರ್ಶಿ ದರ್ಜೆಯ ಅಧಿಕಾರಿಗಳನ್ನು ಚುನಾವಣಾ ಆಯುಕ್ತ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡುವಂತೆ ಕೇಂದ್ರ ಸಚಿವ ಸಂಪುಟವು ಶಿಫಾರಸು ಮಾಡುತ್ತದೆ. ಆ ಶಿಫಾರಸಿನಂತೆ ರಾಷ್ಟ್ರಪತಿಯು ಆಯುಕ್ತ ರನ್ನು ನೇಮಕ ಮಾಡುತ್ತಾರೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಸಮಾಲೋಚನೆ ನಡೆಸಿ ನೇಮಕ ಮಾಡುವಂತಹ ವ್ಯವಸ್ಥೆ ಬೇಕು. ಆ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೂ ಇರಬೇಕು ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಅರ್ಜಿಯ ವಿಚಾರಣೆ ವೇಳೆ ಪೀಠವು,‘ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿರಬೇಕು’ ಎಂದು ಹೇಳಿತು.

ಸರ್ಕಾರದ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ, ‘1991ರ ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಸೇವಾ ಷರತ್ತುಗಳು ಮತ್ತು ಕಾರ್ಯ ನಿರ್ವಹಣೆ) ಕಾಯ್ದೆಯ ಅಡಿಯಲ್ಲಿ ಚುನಾವಣಾ ಆಯುಕ್ತರನ್ನು ಜೇಷ್ಠತೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿದೆ. ಆಯೋಗದ ಸದಸ್ಯರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಈ ಕಾಯ್ದೆ ಯನ್ನು ರೂಪಿಸಲಾಗಿದೆ’ ಎಂದರು.

ಆಗ ಪೀಠವು, ‘ನೀವು ಉಲ್ಲೇಖಿಸುತ್ತಿರುವ ಕಾಯ್ದೆಯು ಹೆಸರೇ ಹೇಳುತ್ತಿರುವಂತೆ ಆಯುಕ್ತರ ಸೇವಾ ಷರತ್ತುಗಳಿಗೆ ಮಾತ್ರ ಸಂಬಂಧಿಸಿದ್ದು.ನಾವು ಹೇಳುತ್ತಿರು ವುದು ಆಯುಕ್ತರ ನೇಮಕಕ್ಕೆ ಸಂಬಂಧಿ ಸಿದ್ದು. ಸರ್ಕಾರವು ತನ್ನದೇ ಸಿದ್ಧಾಂತ ಮತ್ತು ಮನಸ್ಥಿತಿ ಹೊಂದಿರುವ ‘ಹೌದಪ್ಪ’ ಎನ್ನುವ ಅಧಿಕಾರಿಯನ್ನು ಆಯುಕ್ತರಾಗಿ ನೇಮಕ ಮಾಡುತ್ತದೆ ಎಂದಿಟ್ಟುಕೊಳ್ಳಿ. ಹೀಗಿರುವಾಗ ಆಯೋಗವು ಸ್ವತಂತ್ರ ಸಂಸ್ಥೆ ಹೇಗಾಗುತ್ತದೆ? ನೇಮಕದ ಸಂದರ್ಭದಲ್ಲೇ ಆ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು ಎಂಬುದು ನಮ್ಮ ಇಚ್ಛೆ’ ಎಂದು ಹೇಳಿತು.

‘ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವವರು ರಾಜಕೀಯ ಪ್ರಭಾವಗಳಿಂದ ಹೊರತಾಗಿರಬೇಕು ಮತ್ತು ಸ್ವತಂತ್ರವಾಗಿರಬೇಕು.ಪ್ರಧಾನಿ ವಿರುದ್ಧ ಆರೋಪ ಇದೆ ಎಂದಿಟ್ಟುಕೊಳ್ಳಿ. ಆಗ ಮುಖ್ಯ ಚುನಾವಣಾ ಅಧಿಕಾರಿಯು ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು.

ಆದರೆ ಅವರು ತೆಗೆದುಕೊಳ್ಳುವುದಿಲ್ಲ. ಅಂತಹ ಸಂದರ್ಭದಲ್ಲಿ ಇಡೀ ವ್ಯವಸ್ಥೆಯೇ ಕುಸಿದಂತೆ ಆಗುವುದಿಲ್ಲವೇ? ಆಯೋಗವು ಯಾವುದೇ ಕ್ರಮ ತೆಗೆದುಕೊಳ್ಳದ ದುರ್ಬಲ ಸಂಸ್ಥೆಯಂತಿದೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.

ಎಲ್‌.ಕೆ.ಅಡ್ವಾಣಿ ಅವರಂತಹ ನಾಯಕರು ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆ ಬೇಕು ಎಂದು ಹೇಳಿದ್ದರು. ರಾಜಕೀಯ ವಲಯದಿಂದಲೂ ಈ ಬೇಡಿಕೆ ಇದೆ. ಆದರೆ, ಈ ನಿಟ್ಟಿನಲ್ಲಿ ಯಾವ ಪ್ರಕ್ರಿಯೆಯೂ ಆಗಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಸಂವಿಧಾನದ 324ನೇ ವಿಧಿಯು ಆಯುಕ್ತರ ನೇಮಕದ ಬಗ್ಗೆ ಹೇಳುತ್ತದೆ. ಆದರೆ, ನೇಮಕಾತಿ ಹೇಗೆ ನಡೆಯಬೇಕು ಎಂಬುದನ್ನು ಈ ವಿಧಿ ಹೇಳುವುದಿಲ್ಲ. ಈ ಸಂಬಂಧ ಸಂಸತ್ತು ಕಾನೂನು ರಚಿಸಬೇಕು ಎಂದು ವಿಧಿಯು ಹೇಳುತ್ತದೆ. ಆದರೆ, 72 ವರ್ಷಗಳಲ್ಲಿ ಆ ಕೆಲಸ ಆಗಿಯೇ ಇಲ್ಲ. ನೇಮಕಾತಿಗೆ ಸಂಬಂಧಿಸಿದಂತೆ ಕಾನೂನು ಇಲ್ಲದೇ ಇರುವ ಸ್ಥಿತಿಯನ್ನು ಎಲ್ಲಾ ಸರ್ಕಾರಗಳೂ ದುರುಪಯೋಗ ಪಡಿಸಿಕೊಂಡಿವೆ ಎಂದು ಪೀಠವು ಮಂಗಳವಾರದ ವಿಚಾರಣೆ ವೇಳೆಅಭಿಪ್ರಾಯಪಟ್ಟಿತ್ತು.

ಸಂವಿಧಾನ ಪೀಠ ಹೇಳಿದ್ದು...

l2004ರ ನಂತರ ಯಾವ ಮುಖ್ಯ ಚುನಾವಣಾ ಆಯುಕ್ತರೂ ಆರು ವರ್ಷಗಳ ಪೂರ್ಣ ಅವಧಿಯವರೆಗೆ ಅಧಿಕಾರದಲ್ಲಿ ಇರಲಿಲ್ಲ. ಯುಪಿಎ ಅಧಿಕಾರದ 10 ವರ್ಷಗಳ ಅವಧಿಯಲ್ಲಿ ಆರು ಮಂದಿ ಮುಖ್ಯ ಚುನಾವಣಾ ಆಯುಕ್ತರು ಬದಲಾಗಿದ್ದಾರೆ. ಎನ್‌ಡಿಎ ಅವಧಿಯ ಎಂಟು ವರ್ಷಗಳಲ್ಲಿ ಎಂಟು ಮಂದಿ ಬದಲಾಗಿದ್ದಾರೆ

lಅಧಿಕಾರದಲ್ಲಿರುವ ಎಲ್ಲಾ ಪಕ್ಷಗಳೂ ನಿವೃತ್ತಿ ಅಂಚಿನಲ್ಲಿರುವ, ಹೆಚ್ಚು ಅಧಿಕಾರದ ಅವಧಿ ದೊರೆಯದೇ ಇರುವವರನ್ನೇ ಈ ಹುದ್ದೆಗೆ ನೇಮಕ ಮಾಡಿವೆ

lಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌.ಶೇಷನ್‌ (1990ರ ಡಿಸೆಂಬರ್‌ನಿಂದ 1996ರ ಡಿಸೆಂಬರ್‌ವರೆಗೆ ಈ ಹುದ್ದೆಯಲ್ಲಿದ್ದರು) ಅವರಂತಹ ಪ್ರಬಲ ವ್ಯಕ್ತಿ ಈ ಹುದ್ದೆಗೆ ಬರಬೇಕು. ಸಮರ್ಥರ ಜತೆಗೆ ಪ್ರಬಲ ವ್ಯಕ್ತಿತ್ವ ಇರುವವರು ಮುಖ್ಯ ಚುನಾವಣಾ ಆಯುಕ್ತರಾಗುವ ಅಗತ್ಯವಿದೆ

ಗೋಯೆಲ್ ನೇಮಕದ ಕಡತ ಸಲ್ಲಿಸಿ

ಶನಿವಾರವಷ್ಟೇ (ನ. 19) ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾದ ಸ್ವಯಂ ನಿವೃತ್ತ ಅಧಿಕಾರಿ ಅರುಣ್ ಗೋಯೆಲ್‌ ಅವರ ಆಯ್ಕೆಗೆ ಸಂಬಂಧಿಸಿದ ಕಡತಗಳನ್ನು ಗುರುವಾರ ಸಲ್ಲಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಪೀಠವು ತಾಕೀತು ಮಾಡಿದೆ.

ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆ ಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಮಧ್ಯೆಯೇ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅರುಣ್ ಗೋಯೆಲ್‌ ಅವರ ನೇಮಕ ವಿಚಾರವನ್ನು ಪ್ರಸ್ತಾಪಿಸಿದರು. ‘ಗೋಯೆಲ್‌ ಅವರು ಸ್ವಯಂ ನಿವೃತ್ತಿ ಪಡೆದ ಒಂದೇ ದಿನದಲ್ಲಿ ಅವರ ನೇಮಕ ನಡೆದಿದೆ. ಇದರಲ್ಲೇನೋ ಅಕ್ರಮ ಇದೆ’ ಎಂದು ಆರೋಪಿಸಿದರು.

ಆಗ ಪೀಠವು, ‘ಅರುಣ್ ಗೋಯೆಲ್ ಅವರ ನೇಮಕಕ್ಕೆ ಸಂಬಂಧಿಸಿದ ಮೂಲ ದಾಖಲೆ ಪತ್ರಗಳನ್ನು ಸಲ್ಲಿಸಿ’ ಎಂದು ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಸೂಚಿಸಿತು. ಆಗ ಅವರು, ‘ಮುಖ್ಯ ಅರ್ಜಿಗಳ ವಿಚಾರಣೆ ವೇಳೆ ಈ ಪ್ರತ್ಯೇಕ ನೇಮಕಾತಿಯ ವಿಚಾರಣೆ ಅವಶ್ಯಕತೆ ಇಲ್ಲ’ ಎಂದು ಹೇಳಿದರು. ಜತೆಗೆ, ‘ಸಚಿವ ಸಂಪುಟದ ನಿರ್ಧಾರದ ಮೇಲೆ ವಿಶ್ವಾಸ ಇಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಆಗ ಪೀಠವು, ‘ನಾವು ಆ ಬಗ್ಗೆ ಮಾತನಾಡುತ್ತಿಲ್ಲ. ನೇಮಕಾತಿಗೆ ನೀವು ಅನುಸರಿಸಿದ ವಿಧಾನ ಯಾವುದು ಎಂಬುದನ್ನು ಪರಿ ಶೀಲಿಸಲು ದಾಖಲೆಗಳನ್ನು ಕೇಳು ತ್ತಿದ್ದೇವೆ. ನಿಮಗೆ ಸಾಧ್ಯವಿಲ್ಲದೇ ಇದ್ದರೆ, ಬೇರೆ ಅಧಿಕಾರಿಯ ಕೈಯಲ್ಲಿ ಕಡತ ಕಳುಹಿಸಿ. ನಾಳೆ ಬೆಳಿಗ್ಗೆಯವರೆಗೆ ನಿಮಗೆ ಕಾಲಾವಕಾಶವಿದೆ. ಒಂದೊಮ್ಮೆ ನಿಮಗೆ ಇಷ್ಟವಿಲ್ಲ ಎಂದಾದರೆ ಈ ಅರ್ಜಿಯನ್ನು ವಜಾ ಮಾಡಿಬಿಡುವ’ ಎಂದು ಖಾರವಾಗಿ ಹೇಳಿತು. ಆಗ ವೆಂಕಟರಮಣಿ ಅವರು ಕಡತಗಳನ್ನು ಸಲ್ಲಿಸುತ್ತೇವೆ ಎಂದು ಪೀಠಕ್ಕೆ ಹೇಳಿದರು.

***

ಚುನಾವಣಾ ಆಯೋಗವು ಕೆಲಸ ಮಾಡುತ್ತಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್‌ನ ಅಭಿಪ್ರಾಯಗಳು ಸೂಚಿಸುತ್ತವೆ. ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಮಾತ್ರ ಕೋರ್ಟ್‌ ಪ್ರಶ್ನಿಸಿಲ್ಲ. ಬದಲಿಗೆ ಪ್ರಧಾನಿ ವಿರುದ್ಧವೂ ಆಯೋಗ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದೆ

ಮನೋಜ್‌ ಝಾ,ಆರ್‌ಜೆಡಿ ವಕ್ತಾರ ಮತ್ತು ಸಂಸದ

***

ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂನಂತಹ ವ್ಯವಸ್ಥೆ ಬೇಕು ಎಂದು ನಾನು ಆಡಳಿತಾತ್ಮಕ ಆಯೋಗ ವರದಿಯಲ್ಲಿ ಶಿಫಾರಸು ಮಾಡಿದ್ದೆ. ನ್ಯಾಯಾಂಗ ಮತ್ತು ಚುನಾವಣಾ ಆಯೋಗ ಸ್ವತಂತ್ರವಾಗಿ ಇರಬೇಕು ಎಂದಾದರೆ, ಅದನ್ನು ಮಾಡಲೇಬೇಕು

ಎಂ.ವೀರಪ್ಪ ಮೊಯಿಲಿ, ಕಾಂಗ್ರೆಸ್‌ ನಾಯಕ ಮತ್ತು ಮಾಜಿ ಕೇಂದ್ರ ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT